Advertisement

“ಸಮಾಜದ ಋಣ ತೀರಿಸಿ’

10:48 PM Apr 09, 2019 | Team Udayavani |

ಕಡಬ: ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವ ಚಿಂತನೆ ನಮ್ಮಲ್ಲಿ ಮೂಡಬೇಕು. ನಮಗೆ ಎಲ್ಲವನ್ನೂ ನೀಡಿರುವ ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ 3181 ಜಿಲ್ಲಾ ಗವರ್ನರ್‌ ರೋಹಿನಾಥ್‌ ಪಿ. ಅವರು ಹೇಳಿದರು.
ಅವರು ಕಡಬ ರೋಟರಿ ಕ್ಲಬ್‌ಗ ಅಧಿಕೃತ ಭೇಟಿ ನೀಡಿ ಕ್ಲಬ್‌ನ ಸದಸ್ಯರೊಂದಿಗೆ ಸಂವಾದ ನಡೆಸಿದ ಬಳಿಕ ಕಡಬದ ಅನುಗ್ರಹ ಮಿನಿ ಹಾಲ್‌ನಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Advertisement

ಪೋಲಿಯೋ ವಿರುದ್ಧ ನಡೆಯುತ್ತಿರುವ ಹೋರಾಟ ರೋಟರಿ ಸಂಸ್ಥೆಯ ಬಲುದೊಡ್ಡ ಸೇವಾ ಚಟುವಟಿಕೆ. ಪ್ರಸ್ತುತ ಪಾಕಿಸ್ಥಾನ ಹಾಗೂ ಅಫ‌ಘಾನಿಸ್ಥಾನದಲ್ಲಿ ಮಾತ್ರ ಬೆರಳೆಣಿಕೆಯ ಪೋಲಿಯೋ ಪ್ರಕರಣಗಳಿವೆ. ಎಲ್ಲ ಕಡೆಗಳಲ್ಲೂ ಪೋಲಿಯೋ ನಿರ್ಮೂಲನ ಮಾಡುವ ಗುರಿ ಇಟ್ಟುಕೊಂಡು ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದ ಅವರು, ಕಡಬ ಬಸ್‌ ನಿಲ್ದಾಣದ ಬಳಿ ಪೊಲೀಯೋ ಲಸಿಕಾ ಕೇಂದ್ರ ತೆರೆದು ಪ್ರತಿ ವರ್ಷ 1,000ಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡುವ ಕಡಬ ರೋಟರಿ ಕ್ಲಬ್‌ನ ಕಾರ್ಯವನ್ನು ಶ್ಲಾಘಿಸಿದರು.

13 ಹೊಸ ಕ್ಲಬ್‌ಗಳ ರಚನೆ
ಅಸಿಸ್ಟಂಟ್‌ ಗವರ್ನರ್‌ ಆಸ್ಕರ್‌ ಆನಂದ್‌ ಮಾತನಾಡಿ, ರೋಟರಿ ಜಿಲ್ಲಾ ಗವರ್ನರ್‌ ರೋಹಿನಾಥ್‌ ಅವರ ನೇತೃತ್ವದಲ್ಲಿ ಪ್ರಸ್ತುತ ವರ್ಷ ವಿಶೇಷ ಸಾಧನೆಗಳಾಗಿವೆ. ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ 13 ಹೊಸ ಕ್ಲಬ್‌ಗಳ ರಚನೆ, 750ಕ್ಕೂ ಹೆಚ್ಚು ಹೊಸ ಸದಸ್ಯರ ಸೇರ್ಪಡೆ, 100 ಇಂಟರ್ಯಾಕ್ಟ್ ಕ್ಲಬ್‌ಗಳು ಹಾಗೂ 39 ರೋಟರ್ಯಾಕ್ಟ್ ಕ್ಲಬ್‌ಗಳ ಸ್ಥಾಪನೆಯಾಗಿದೆ. ಇದು ರೋಟರಿ ಇತಿಹಾಸದಲ್ಲಿ ಗಮನಾರ್ಹ ಸಾಧನೆ ಎಂದರು.

ಕಡಬ ರೋಟರಿ ಕ್ಲಬ್‌ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಅಚ್ಯುತ ಪ್ರಭು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಡಬ ರೋಟರಿ ಕ್ಲಬ್‌ನ ಅಧ್ಯಕ್ಷ ಹರೀಶ್‌ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮಹ್ಮದ್‌ ರಫೀಕ್‌ ವರದಿ ಮಂಡಿಸಿ, ವಂದಿಸಿದರು. ಕ್ಲಬ್‌ನ ಸ್ಥಾಪಕಾಧ್ಯಕ್ಷ ರಮೇಶ್‌ ಕಲ್ಪುರೆ ನಿರೂಪಿಸಿದರು. ಥಾಮಸ್‌ ಇ.ಕೆ. ಅಂತಾರಾಷ್ಟ್ರೀಯ ರೋಟರಿಗೆ ಕ್ಲಬ್‌ನ ವತಿಯಿಂದ ನೀಡಲಾದ ದೇಣಿಗೆಯನ್ನು ಹಸ್ತಾಂತರಿಸಿದರು.

ಸಮ್ಮಾನ
ರೋಟರಿ ಜಿಲ್ಲಾ ಗವರ್ನರ್‌ ರೋಹಿನಾಥ್‌ ಪಿ., 42 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕಡಬ ರೋಟರಿ ಕ್ಲಬ್‌ನ ಸದಸ್ಯೆ ಗ್ರೇಸಿ ಪಿಂಟೋ, ಭಾರತೀ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಪಿ.ಟಿ. ಫಿಲಿಪ್‌, ಅಬುಧಾಬಿಯಲ್ಲಿ ಜರಗಿದ ಸ್ಪೆಷಲ್‌ ಒಲಿಂಪಿಕ್ಸ್‌ ವರ್ಲ್ಡ್ ಗೇಮ್ಸ್‌ನ ವಾಲಿಬಾಲ್‌ನಲ್ಲಿ ಕಂಚಿನ ಪದಕ ಪಡೆದ ಮರ್ದಾಳದ ಬೆಥನಿ ಜೀವನ್‌ ಜ್ಯೋತಿ ವಿಶೇಷ‌ ಶಾಲೆಯ ವಿದ್ಯಾರ್ಥಿನಿ ದಿವ್ಯಾ ಬೆತ್ತೋಡಿ ಅವರನ್ನು ಸಮ್ಮಾನಿಸಲಾಯಿತು. ಸುಜಿತ್‌ ಪಿ.ಕೆ., ಶೀಲಾ ಹರೀಶ್‌, ವಲ್ಸಮ್ಮ ಸ್ಕರಿಯ ಹಾಗೂ ವಿ.ಎಂ. ಕುರಿಯನ್‌ ಅವರು ಸಮ್ಮಾನಿತರನ್ನು ಪರಿಚಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next