ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ(ಮೈಸೂರು): “ನಾಡಿನ ನೆಲ-ಜಲ-ಭಾಷೆ ವಿಷಯದಲ್ಲಿ ಯುವಜನರು ಹೋರಾಟ ನಡೆಸಬೇಕಾದ ಅಗತ್ಯವಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ಕಾವೇರಿ ನದಿ ನೀರು ಹಂಚಿಕೆ, ಮಹದಾಯಿ ವಿಚಾರವಾಗಿ ಅನೇಕ ಸಂಘಸಂಸ್ಥೆಗಳು ಹೋರಾಟ ನಡೆಸುತ್ತಿವೆ. ಇಂತಹ ಹೋರಾಟಗಳನ್ನು ಮುಂದುವರಿಸಬೇಕು. ಆದರೆ, ಯಾವುದೇ ಹೋರಾಟವು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳದೆ ಅಹಿಂಸಾತ್ಮಕವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ರಾಜಕಾರಣ ಬಿಟ್ಟು ಕೆಲಸ ಮಾಡುವುದು ಕಷ್ಟ. ಅವರ ಬಾಹುಗಳು ಎಲ್ಲ ಕಡೆಗಳಲ್ಲಿ ಚಾಚಿವೆ ಎಂದರು. ಕರ್ನಾಟಕಕ್ಕೆ ಒಂದು ರಾಜಕೀಯ ಪಕ್ಷ ಅಗತ್ಯ ಎಂಬುದನ್ನು ಚಂಪಾ ಅವರೇ ಹೇಳಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದ ಅವರು, ದೇಶದಲ್ಲಿ ಇತ್ತೀಚಿನ ಘಟನಾವಳಿಗಳನ್ನು ಕಂಡರೆ ನೋವಾಗುತ್ತದೆ.
ಗುಜರಾತ್‌ನ ಬಿಷಪ್ ಒಬ್ಬರು ಮುಂಬರುವ ಚುನಾವಣೆಯಲ್ಲಿ ಜಾತ್ಯತೀತ ಪಕ್ಷವನ್ನು ಬೆಂಬಲಿಸಿ ಎಂದು ಅಲ್ಲಿನ ಚರ್ಚ್‌ಗಳಿಗೆ ಬರೆದ ಪತ್ರದ ಬಗ್ಗೆ ಇಲ್ಲಿ ನಡೆಯುವ ಧರ್ಮ ಸಂಸದ್‌ನಲ್ಲಿ ಪೇಜಾವರ ಶ್ರೀಗಳು ಪ್ರಸ್ತಾಪಿಸುತ್ತಾರೆ. ಆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತದೆ. ಬಿಷಪ್ ತನ್ನ ಅಭಿಪ್ರಾಯವನ್ನು ಹೇಳಲೂ ಅವಕಾಶವಿಲ್ಲವೇ? ಅಂಬೇಡ್ಕರ್ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ ಕಲ್ಪಿಸಿಲ್ಲವೇ ಎಂದು ಪ್ರಶ್ನಿಸಿದರು.
ಒಂದು ಕಡೆ ಧರ್ಮಗಳ ನಡುವೆ ಹೊಡೆದಾಟ ನಡೆಯುತ್ತದೆ. ಅಂಬೇಡ್ಕರ್ ಬರೆದಿರುವ ಸಂವಿಧಾನದ ಬಗ್ಗೆ ಹೊಸ ವ್ಯಾಖ್ಯಾನಗಳು ನಡೆಯುತ್ತವೆ. ಅಸ್ಪೃಶ್ಯತೆ ಇರಬಾರದು ಎಂದು ಈಗ ಹೇಳುತ್ತಾರೆ. ಇಂತಹ ಘಟನೆಗಳು ದೇಶಕ್ಕೆ ಅಪಾಯಕಾರಿ ಎಂದು ಹೇಳಿದರು.
ಧಾರ್ಮಿಕತೆ ಎನ್ನುವುದು ಅವರವರ ನಂಬಿಕೆಗೆ ಬಿಟ್ಟದ್ದು, ತಮಿಳುನಾಡಿನಲ್ಲಿ ಪೆರಿಯಾರ್ ಧಾರ್ಮಿಕತೆ ವಿರುದ್ಧ ದೊಡ್ಡ ಚಳವಳಿಯನ್ನೇ ಮಾಡಿದ್ದರು, ಇಂದು ತಮಿಳುನಾಡಿನ ಯಾವುದೇ ಕ್ಷೇತ್ರಕ್ಕೆ ಹೋದರೂ ಹತ್ತು ಪಟ್ಟು ಭಕ್ತರ ಸಂಖ್ಯೆ ಹೆಚ್ಚಾಗಿದೆ. ನಾನು ಪ್ರಧಾನಮಂತ್ರಿಯಾಗಿದ್ದಾಗ ತಿರುಪತಿಗೆ ಹೋಗುವುದಕ್ಕೆ ಜ್ಯೋತಿಬಸು ಸೇರಿದಂತೆ ಕಮ್ಯುನಿಷ್ಟ್ ಪಕ್ಷದ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದರು,
ಬೇಕಿದ್ದರೆ ಪ್ರಧಾನಮಂತ್ರಿ ಹುದ್ದೆ ಬಿಡುತ್ತೇನೆ. ಆದರೆ, ನಾನು ನಂಬಿರುವ ಸಿದ್ಧಾಂತ ಬಿಡುವುದಿಲ್ಲ ಎಂದು ತಿರುಪತಿಗೆ ಹೋಗಿದ್ದೆ ಎಂದು ಸ್ಮರಿಸಿದರು. ಸಾಹಿತಿ ಗೊ.ರು.ಚನ್ನಬಸಪ್ಪ ಆಶಯ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ 80ಕ್ಕೂ ಹೆಚ್ಚು ಮಂದಿಗೆ ಸನ್ಮಾನ ಮಾಡಲಾಯಿತು.