Advertisement

ಬೀದರ್‌ನಲ್ಲಿ ನಿಲ್ಲದ ಕೋವಿಡ್‌-19 ಸೋಂಕಿನ ಸಾವಿನ ಸರಣಿ

08:21 PM Jun 20, 2020 | Sriram |

ಬೀದರ್‌ : ಜಿಲ್ಲೆಯಲ್ಲಿ ರಕ್ಕಸ ಕೋವಿಡ್‌-19 ಅಟ್ಟಹಾಸದಿಂದ ಸಾವಿನ ಸರಣಿ ಮುಂದುವರೆದಿದ್ದು, ಶನಿವಾರ ಮತ್ತಿಬ್ಬರು ಸೋಂಕಿತರನ್ನು ಬಲಿ ಪಡೆದಿದೆ. ಐದು ದಿನದಲ್ಲಿ 7 ಜನರ ಸಾವು ಸಂಭವಿಸಿದೆ. ಇನ್ನೊಂದೆಡೆ ಒಂದೇ ದಿನ ಹೊಸ 73 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 500ರ ಗಡಿಗೆ ತಲುಪಿದೆ.

Advertisement

ಮಂಗಳವಾರದಿಂದ ಸತತ ಐದು ದಿನಗಳಿಂದ ಮರಣ ಮೃದಂಗ ಬಾರಿಸಿರುವ ಕೋವಿಡ್‌-19 ನಿನ್ನೆಯಷ್ಟೇ ಇಬ್ಬರನ್ನು ಬಲಿ ಪಡೆದಿತ್ತು. ಮತ್ತೆ ಶನಿವಾರ ಮತ್ತಿಬ್ಬರ ಜೀವ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್-19ಕ್ಕೆ ಸಾವನ್ನಪ್ಪಿರುವ ಸಂಖ್ಯೆ ಈಗ 13ಕ್ಕೆ ಏರಿಕೆ ಆಗಿದ್ದು, ಮರಣ ಪ್ರಮಾಣದಲ್ಲಿ ರಾಜ್ಯದಲ್ಲಿ ಬೀದರ ಎರಡನೇ ಸ್ಥಾನಕ್ಕೆ ತಲುಪಿದ್ದು, ಜಿಲ್ಲೆಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ಕಲ್ಬುರ್ಗಿ ಬಸವೇಶ್ವರ ನಗರದ 51ವರ್ಷದ ಮಹಿಳೆ (ಪಿ 8423) ಜ್ವರ, ಉಸಿರಾಟದ ತೊಂದರೆ ಹಿನ್ನಲೆ ಜೂ. 15ಕ್ಕೆ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಜೂ. 19ಕ್ಕೆ ಸಾವನ್ನಪ್ಪಿದ್ದಾರೆ. ಬೀದರ ತಾಲೂಕಿನ ಬಗದಲ್ ಗ್ರಾಮದ 65ವರ್ಷದ ವ್ಯಕ್ತಿ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಜೂ. 15ಕ್ಕೆ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತಪಟ್ಟಿದ್ದಾರೆ. ಇಬ್ಬರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ದೃಢಪಡಿಸಿದೆ.

ಇನ್ನೂ ಬೀದರ್ ಜಿಲ್ಲೆಯಲ್ಲಿ ಶನಿವಾರ ಅತಿ ಹೆಚ್ಚು 73 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಕೋವಿಡ್-19 ಆರ್ಭಟಿಸಿದ್ದು, ಬೀದರ ತಾಲೂಕಿನಲ್ಲಿ ಹೆಚ್ಚು ಸೋಂಕು ಕೇಸ್‌ಗಳು ಒಕ್ಕರಿಸಿವೆ. ಇತ್ತಿಚೆಗೆ ಮೃತಪಟ್ಟಿರುವ ಅಂಬೇಡ್ಕರ ವೃತ್ತ ಬಳಿ ನಿವಾಸಿ (ಪಿ 7524)ಯ ಕುಟುಂಬದ 14 ಜನರಿಗೆ ವೈರಾಣಿ ತಗುಲಿದ್ದು, ಮುಖ್ಯ ಮಾರುಕಟ್ಟೆ ಕೇಂದ್ರವಾಗಿರು ವುದರಿಂದ ಈ ಪ್ರದೇಶದಲ್ಲಿ ವೈರಸ್‌ನ ಭೀತಿ ಆವರಿಸಿದೆ.

ಬೀದರ್ ನಗರದ ಅಂಬೇಡ್ಕರ ವೃತ್ತ ಪ್ರದೇಶ 16, ಸಿಎಂಸಿ ಕಾಲೋನಿ ಮತ್ತು ಮೈಲೂರ ಕಾಲೋನಿಯ ತಲಾ 3, ವಡ್ಡರ್ ಕಾಲೋನಿ, ಕೆಎಚ್‌ಬಿ ಕಾಲೋನಿ (ಪ್ರತಾಪ ನಗರ) ತಲಾ 2, ನಂದಿ ಕಾಲೋನಿ 1 ಮತ್ತು ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ 2 ಸೇರಿ ಒಟ್ಟು 32 ಕೇಸ್‌ಗಳು ಪತ್ತೆಯಾಗಿದ್ದರೆ, ಚಿಟಗುಪ್ಪ ಪಟ್ಟಣ ಒಂದರಲ್ಲೇ 28 ಪಾಸಿಟಿವ್ ವರದಿಯಾಗಿವೆ. ಹುಮನಾಬಾದ ತಾಲೂಕಿನ ಜನತಾ ನಗರ 4, ಘೋಷಡವಾಡಿ 3 ಮತ್ತು ಘಾಟಬೋರಾಳದಲ್ಲಿ 1 ಕೇಸ್ ಸೇರಿ ಒಟ್ಟು 8 ಪ್ರಕರಣಗಳು, ಬಸವಕಲ್ಯಾಣ ತಾಲೂಕಿನ ಹತ್ಯಾಳ್, ಘೋಡವಾಡಿ ಮತ್ತು ಗುಣತೀರ್ಥವಾಡಿ ಗ್ರಾಮದಲ್ಲಿ ತಲಾ 1 ಸೇರಿ ಒಟ್ಟು 3 ಕೇಸ್‌ಗಳು ವರದಿಯಾಗಿವೆ.

Advertisement

ಜಿಲ್ಲೆಯಲ್ಲಿ ಈವರೆಗೆ 484 ಪಾಸಿಟಿವ್ ಪ್ರಕರಣಗಳು ಆದಂತಾಗಿದ್ದು, ಶನಿವಾರ 12 ಜನ ಸೇರಿ ಒಟ್ಟು 266 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 205 ಸಕ್ರೀಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next