Advertisement
ಆರ್.ಆರ್.ನಗರದಲ್ಲಿರುವ ಬಂಗಾರಪ್ಪನ ಗುಡ್ಡ ನಿವಾಸಿಗಳಾದ ಯದು ಕುಮಾರ್(18) ಮತ್ತು ಚಂದ್ರಕಾಂತ್(18) ಮೃತರು. ಘಟನೆಯಲ್ಲಿ ಗಾಯಗೊಂಡಿರುವ ಮತ್ತೂಬ್ಬ ವಿದ್ಯಾರ್ಥಿ ಬಾಪೂಜಿನಗರ ನಿವಾಸಿ ರಾಜೇಶ್ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಒಂದೂವರೆ ಗಂಟೆ ಸಂಚಾರ ದಟ್ಟಣೆ: ರಸ್ತೆ ಅಪಘಾತದಿಂದ ವಾಹನ ಸವಾರರು ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯಲ್ಲೇ ಕಾಲ ಕಳೆಯ ಬೇಕಾಯಿತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬ್ಯಾಟರಾಯಪುರ ಸಂಚಾರ ಪೊಲೀಸರು ಕ್ರೇನ್ ಮೂಲಕ ಬಸ್ ಅನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಕ್ಟೋರಿಯಾ ಆಸ್ಪತ್ರೆಯ ಶವಗಾರದ ಬಳಿ ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಒಬ್ಬನೇ ಯಪ್ಪಾ: “ನನ್ನ ಮಗ ಹೊಟ್ಟೆಯಲ್ಲಿ ಇದ್ದಾಗಲೇ ಗಂಡ ಬಿಟ್ಟು ಹೋಗಿಬಿಟ್ಟ (18 ವರ್ಷ ಕಳೆದಿದೆ). ಬಳಿಕ ನಾನು ತವರು ಮನೆಗೆ ಬಂದೆ. ನನ್ನ ಕೂಸನ್ನು ನಾನೇ ಸಾಕಿದ್ದೇನೆ. ಹಾಸ್ಟೆಲ್‌ನಲ್ಲಿ ಇಟ್ಟು ಓದಿಸಿದ್ದೇನೊ ಯಪ್ಪಾ. 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬಂಗಾರಪ್ಪನ ಗುಡ್ಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಹೋಟೆಲ್‌ವೊಂದರಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ.
ನನ್ನ ಕಷ್ಟ ನೋಡಲಾಗದೆ, ನನ್ನ ಮಗ ಕಾಲೇಜು ಮುಗಿಸಿಕೊಂಡು ಬಂದು ಡ್ಯಾನ್ಸ್ ಶಾಲೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆತನಿಗೆ ಮೂರು ಸಾವಿರ ರೂ. ಸಂಬಳ ಕೊಡುತ್ತಿದ್ದರು. ಇದಕ್ಕೆಲ್ಲ ಆಸೆ ಬಿಳಬೇಡ ಮಗನೇ, ಚೆನ್ನಾಗಿ ಓದಬೇಕು ಎಂದು ಬುದ್ಧಿ ಹೇಳಿದ್ದೆ. ಹೆದರಬೇಡ ಅವ್ವ, ನಿನ್ನ ಆಸೆಯಂತೆ ನಾನು ಚೆನ್ನಾಗಿ ಓದುತ್ತೇನೆ ಎಂದು ಹೇಳಿದ್ದ. ಆದರೆ, ಇವತ್ತು ಏನು ಹೇಳದೆ ಮೌನವಾಗಿ ಮಲಗಿದ್ದಾನೆ ಎಂದು ಚಂದ್ರಕಾಂತ್ ತಾಯಿ ಲಕ್ಷ್ಮಿ ಗೋಳಾಡಿದರು.
ಕಳೆದ ಪರೀಕ್ಷೆಯಲ್ಲಿ ನನ್ನ ಸಹೋದರ 515 ಅಂಕಗಳಿಸಿದ್ದ. ಮುಂದೆಯೂ ಇದೇ ರೀತಿಯ ಅಂಕಗಳಿಸಿ, ಕಾಲೇಜಿಗೆ ಫಸ್ಟ್ ಬರುತ್ತೇನೆ ಎಂದಿದ್ದ ಎಂದು ಹೇಳುವಾಗ ಚಂದ್ರಕಾಂತ್ ಸಹೋದರಿಯ ಕಣ್ಣುಗಳು ಒದ್ದೆಯಾಗಿದ್ದವು.
ವಿದ್ಯಾರ್ಥಿಗಳ ಪ್ರತಿಭಟನೆ: ವಿಕ್ಟೋರಿಯಾ ಆಸ್ಪತ್ರೆಯ ಹಿಂಭಾಗದ ಗೇಟ್ ಬಳಿ ನೂರಾರು ವಿದ್ಯಾರ್ಥಿಗಳು ಕೆಲ ಕಾಲ ಪ್ರತಿಭಟನೆ ನಡೆಸಿದರು. ನಮ್ಮ ಸ್ನೇಹಿತರನ್ನು ಬಲಿ ಪಡೆದ ಬಿಎಂಟಿಸಿ ಚಾಲಕನನ್ನು ಬಂಧಿಸಿ ಜೈಲು ಶಿಕ್ಷೆ ಕೊಡಿಸಬೇಕು. ಮೈಸೂರು ರಸ್ತೆಯ ಕ್ರಿಶ್ಚಿಯನ್ ಸ್ಮಶಾನದ ಬಳಿ ರಸ್ತೆ ದಾಟಲು ಯಾವುದೇ ಸ್ಕೈವಾಕ್‌ಗಳಿಲ್ಲ. ರಸ್ತೆ ವಿಭಜಕಗಳು ಸರಿ ಇಲ್ಲ. ಪಾದಾಚಾರಿಗಳು ಓಡಾಡುವ ಫುಟ್‌ಪಾತ್ ಮೇಲೆ ಜಲ್ಲಿಕಲ್ಲುಗಳನ್ನು ಹಾಕಿದ್ದಾರೆ. ಕೂಡಲೇ ಸರಿಯಾದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಲ್ಲಿಕಲ್ಲು ಇಲ್ಲದಿದ್ದರೆ ಏನಾಗುತ್ತಿತ್ತು?: ಬೆಳಗ್ಗೆ 8 ಗಂಟೆ ಸುಮಾರಿಗೆ ಗೋಪಾಲನ್ ಮಾಲ್ ಸಮೀಪದ ಪೆಟ್ರೋಲ್ ಬಂಕ್ ಬಳಿಯ ಫುಟ್‌ಪಾತ್ ಮೇಲೆ ಇಬ್ಬರು ವಿದ್ಯಾರ್ಥಿಗಳು ನಡೆದು ಹೋಗುತ್ತಿದ್ದರು. ಪೆಟ್ರೋಲ್ ಬಂಕ್ ಪಕ್ಕದಲ್ಲೇ ಖಾಸಗಿ ಕಟ್ಟಡವೊಂದು ನಿರ್ಮಾಣ ಮಾಡುತ್ತಿದ್ದರಿಂದ ಜಲ್ಲಿಕಲ್ಲು ಮತ್ತು ಮರಳನ್ನು ಫುಟ್‌ಪಾತ್ ಮೇಲೆಯೇ ಹಾಕಲಾಗಿತ್ತು.
ಈ ವೇಳೆ ಬಿಎಂಟಿಸಿ ಬಸ್ ಬಂದು ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೃತಪಟ್ಟಿದ್ದಾರೆ.ಒಂದು ವೇಳೆ ಈ ಸ್ಥಳದಲ್ಲಿ ಜಲ್ಲಿಕಲ್ಲು ರಾಶಿ ಇಲ್ಲದಿದ್ದರೆ, ಬಸ್ ನೇರವಾಗಿ ಕಟ್ಟಡ ನಿರ್ಮಾಣಕ್ಕೆಂದು ಅಗೆದಿದ್ದ ಹತ್ತಾರು ಅಡಿ ಗುಂಡಿಗೆ ಹೋಗಿ ಬೀಳುತ್ತಿತ್ತು ಎಂದು ಸಂಚಾರ ಪೊಲೀಸರು ಹೇಳಿದರು.
ಬ್ರೇಕ್ ಫೆಲ್ಯೂರ್ ಕಾರಣ?: ಪ್ರಾಥಮಿಕ ಮಾಹಿತಿ ಪ್ರಕಾರ ಬ್ರೇಕ್ ಫೆಲ್ಯೂರ್‌ನಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ. ನಾಯಂಡಹಳ್ಳಿ ಬಳಿಯೇ ಬಸ್‌ನ ಕ್ಲಚ್‌ನಲ್ಲಿ ಸದ್ದು ಬರುತ್ತಿದೆ ಎಂದು ಚಾಲಕ ಲೋಕೇಶ್ ಬಸ್ ನಿಲ್ಲಿಸಿದ್ದರು. ಆ ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರು, ಪ್ರಯಾಣಿಕರನ್ನು ಮಾರುಕಟ್ಟೆಗೆ ಬಿಟ್ಟು ಖಾಲಿ ಬರುವಂತೆ ಸೂಚಿಸಿದ್ದರು ಎಂದು ಚಾಲಕ ಲೋಕೇಶ್ ಹೇಳಿರುವುದಾಗಿ ಸಂಚಾರ ಪೊಲೀಸರು ತಿಳಿಸಿದರು.
ಘಟನೆ ನಡೆಯುತ್ತಿದ್ದಂತೆ ಚಾಲಕ ಲೋಕೇಶ್, ಗಾಬರಿಗೊಂಡು ಹೃದಯಘಾತಕ್ಕೊಳಗಾದವರಂತೆ ನಟಿಸಿದರು. ಬಳಿಕ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್‌ಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.
ತಲಾ 10 ಲಕ್ಷ ರೂ. ಪರಿಹಾರ: ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಬಿಬಿಎಂಪಿಯಿಂದ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದರು. ಮಂಗಳವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.
ಬಿಎಂಟಿಸಿ ಬಸ್ ಹರಿದು ಮೃತಪಟ್ಟಿರುವ ಚಂದ್ರಕಾಂತ್ ಹಾಗೂ ಯದುಕುಮಾರ್ ಎಂಬ ವಿದ್ಯಾರ್ಥಿಗಳು ಬಿಬಿಎಂಪಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಮೃತರ ಕುಟುಂಬಕ್ಕೆ ಪಾಲಿಕೆಯಿಂದ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಇನ್ನು ಈ ಅಪಘಾತಕ್ಕೆ ಕಾರಣ ಚಾಲಕನ ನಿರ್ಲಕ್ಷ್ಯವೋ ಅಥವಾ ಬಸ್ ಬ್ರೇಕ್ ವೈಪಲ್ಯದಿಂದಾಗಿದೆಯೇ ಎಂಬುರ ಬಗ್ಗೆ ತನಿಖೆ ನಡೆಸಲು ಬಿಎಂಟಿಸಿ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದರು.
ದುರ್ಘಟನೆಗೆ ಬ್ರೇಕ್ ಫೆಲ್ಯೂರ್ ಎಂದು ಹೇಳಲಾಗಿದೆ. ಆದರೆ, ಸಮಗ್ರ ತನಿಖೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ಕುಟುಂಬಗಳಿಗೆ ಬಿಬಿಎಂಪಿಯಿಂದ ಆರ್ಥಿಕ ನೆರವು ನೀಡಲಾಗುವುದು. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ರಸ್ತೆ ದಾಟಲು ಸ್ಕೈವಾಕ್ ಅಗತ್ಯವಿದೆ ಎಂದು ಕೇಳಿದ್ದಾರೆ. ಆದರೆ, 100 ಮೀಟರ್ ದೂರದಲ್ಲೇ ಸ್ಕೈವಾಕ್ ಇರುವುದರಿಂದ ಮತ್ತೂಂದು ಸ್ಕೈವಾಕ್ ಕಷ್ಟ.-ಗಂಗಾಬಿಕೆ, ಬಿಬಿಎಂಪಿ ಮೇಯರ್ ಒಳ್ಳೆಯ ವಿದ್ಯಾರ್ಥಿಗಳು
ಯದುಕುಮಾರ್ ಮತ್ತು ಚಂದ್ರಕಾಂತ್ ಉತ್ತಮ ವಿದ್ಯಾರ್ಥಿಗಳು. ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಯದುಕುಮಾರ್ ಮಾರ್ಚ್‌ನಲ್ಲಿ ನಡೆಯುವ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗುತ್ತಿದ್ದ.
-ಜಯರಾಮ್, ಬಿಬಿಎಂಪಿ ಕಾಲೇಜಿನ ಪ್ರಾಂಶುಪಾಲರು.