ಗಜೇಂದ್ರಗಡ: ಕಲುಷಿತ ನೀರು ಸೇವಿಸಿ ತೀವ್ರ ವಾಂತಿ-ಬೇಧಿಯಿಂದ ಬಳಲಿ 20ಕ್ಕೂ ಅಧಿಕ ಜನರು ಅಸ್ವಸ್ಥರಾಗಿ, ಒಂದೇ ಕುಟುಂಬದ ಸಹೋದರರಿಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ದಾರುಣ ಘಟನೆ ಸಮೀಪದ ದಿಂಡೂರ ಗ್ರಾಮದಲ್ಲಿ ನಡೆದಿದೆ.
ರಾಜೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಜಲಜೀವನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್‌ಲೈನ್ ಕಾಮಗಾರಿ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದ ಪರಿಣಾಮ ಕುಡಿಯುವ ನೀರು ಕಲುಷಿತಗೊಂಡಿದೆ. ಹಾಗಾಗಿ, ಇಡೀ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗಿದೆ. ಅದೇ ಕಲುಷಿತ ನೀರು ಸೇವನೆ ಮಾಡಿದ ಗ್ರಾಮದ ಹಲವಾರು ಜನರು, ಕಳೆದೊಂದು ವಾರದಿಂದ ವಾಂತಿ, ಬೇಧಿ, ಕೈಕಾಲು ನೋವು, ಜ್ವರ ಸೇರಿದಂತೆ ಇನ್ನಿತರ ರೋಗಬಾಧೆಗಳಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರ್‍ನಾಲ್ಕು ತಿಂಗಳಿಂದ ಗ್ರಾಮದಲ್ಲಿ ಜಲಜೀವನ್ ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ವಿಳಂಬ ನೀತಿಯೇ ಈ ಅವಘಡ ಸಂಭವಿಸಲು ಕಾರಣವಾಗಿದೆ. ಈಗಾಗಲೇ ಗ್ರಾಮದ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದಿವೆ. ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಆಸ್ಪತ್ರೆ ಸೇರುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಗ್ರಾಮದ ಜನರು ಆಡಳಿತದ ವಿರುದ್ಧ ಕಿಡಿ ಕಾರಿದರು.
ಸಹೋದರರ ಸಾವು: ದಿಂಡೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ತೀವ್ರ ವಾಂತಿ, ಬೇಧಿಯಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಒಂದೇ ಕುಟುಂಬದ ಸಹೋದರರಿಬ್ಬರು ಮೃತಪಟ್ಟಿದ್ದಾರೆ. ಕಳಕಪ್ಪ ಮಲ್ಲಪ್ಪ ಮೇಟಿ (75) ಹಾಗೂ ಶರಣಪ್ಪ ಮಲ್ಲಪ್ಪ ಮೇಟಿ (52) ಮೃತ ದುರ್ದೈವಿ ಸಹೊದರರು.
ವಾಂತಿ, ಬೇಧಿಯಿಂದ ಬಳಲುತ್ತಿದ್ದ ಸಹೋದರರನ್ನು ಗದಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೇ ಗುರುವಾರ ಇಬ್ಬರೂ ಮೃತಪಟ್ಟಿ ದ್ದಾರೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಅಧಿ ಕಾರಿಗಳ ದೌಡು: ದಿಂಡೂರ ಗ್ರಾಮದಲ್ಲಿ ವಾಂದಿ ಬೇಧಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಸಮೀûಾ ಧಿಕಾರಿ ಡಾ|ಜಗದೀಶ ನುಚ್ಚಿನ, ಸಾಂಕ್ರಾಮಿಕ ರೋಗ ತಜ್ಞ ಡಾ|ಪ್ರವೀಣ ನಿಡಗುಂದಿ, ಡಾ|ಶರಣು ಗಾಣಗೇರ, ರಘು ಹೊಸೂರ, ಡಾ|ಆರ್.ಎಸ್. ಹೊಸಮನಿ, ಮನೋಹರ ಕಣ್ಣಿ, ಬಿ.ಆರ್.ಪಾಟೀಲ, ಕೆ.ಎ.ಹಾದಿಮನಿ ಸೇರಿದಂತೆ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಆರೋಗ್ಯ ತಪಾಸಣೆಗೆ ಮುಂದಾದರು. ನಂತರ ಗ್ರಾಮದಲ್ಲಿ ನೀರು ಸರಬರಾಜಾಗುವ ಓವರ್‌ಹೆಡ್ ಟ್ಯಾಂಕ್ ಮತ್ತು ಪೈಪ್‌ಲೈನ್ ಒಡೆದ ಸ್ಥಳಗಳನ್ನು ಪರಿಶೀಲಿಸಿದರು.
ಜಿಲ್ಲಾ ಸಮೀಕ್ಷಾಧಿಕಾರಿ ಡಾ|ಜಗದೀಶ ನುಚ್ಚಿನ ಮಾತನಾಡಿ, ಗ್ರಾಮದಲ್ಲಿ ಸರಬರಾಜು ಆಗುವ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಕಳುಹಿಸಲಾಗುವುದು. ಈ ಕುರಿತು ಆರೋಗ್ಯ ಇಲಾಖೆಯಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅರ್ಧಂಬರ್ಧ ಕಾಮಗಾರಿ-ಗ್ರಾಮಸ್ಥರ ಆಕ್ರೋಶ: ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ ಜಲಜೀವನ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಕಾಮಗಾರಿ ತ್ವರಿತಗತಿಯಲ್ಲಿ ನಡೆಸದ ಪರಿಣಾಮ ಇದೀಗ ಗ್ರಾಮದಲ್ಲಿ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಅ ಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯೇ ಕಾರಣ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಯೋಜನೆ ಹಿಂಪಡೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.