Advertisement

ಕಂಪ್ಲಿ ಭಾಗದಲ್ಲಿ ನವಿಲುಗಳ ಮಾರಣಹೋಮ

07:03 AM Mar 22, 2019 | Team Udayavani |

ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾ.ಪಂ.ವ್ಯಾಪ್ತಿಯ ಚಿನ್ನಾಪುರದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿಯಿಂದ ನವಿಲುಗಳು ಬಲಿಯಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ತಮ್ಮೂರು ಸುತ್ತಮುತ್ತ ಕಾಣಸಿಗುತ್ತಿದ್ದ ನವಿಲುಗಳು ಕಣ್ಮರೆಯಾಗುತ್ತಿರುವ ನವಿಲುಗಳನ್ನು ಉಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಚಿನ್ನಾಪುರ ಗ್ರಾಮದ ಬಿಂಚಿಮಟ್ಟಿಯ ಪಿಲುಗುಂಡು ಗುಡ್ಡದ ಪ್ರದೇಶ ಪ್ರವೇಶಿಸಿದರೆ ಪಕ್ಷಿ ಪ್ರೇಮಿಗಳಿಗೆ ಹಬ್ಬವೇ ಸರಿ. ಈ ಭಾಗದಲ್ಲಿ ಹೇರಳವಾಗಿರುವ ನವಿಲುಗಳ ನೃತ್ಯ ಸಾರ್ವಜನಿಕರ ಮನಸೂರೆಗೊಳ್ಳುತ್ತದೆ.

ಸ್ಥಳೀಯ ರೈತರು, ಮಕ್ಕಳು ನವಿಲುಗಳ ಕಲರವ, ನೃತ್ಯ ವೀಕ್ಷಿಸಲು ಪಿಲುಗುಂಡು ಗುಡ್ಡಕ್ಕೆ ತೆರಳುತ್ತಾರೆ. ಆದರೆ ಇತ್ತೀಚೆಗೆ ಗುಡ್ಡ ಪ್ರದೇಶದಲ್ಲಿ ಚಿರತೆಗಳ ಹಾವಳಿ ಅಧಿಕವಾಗಿದ್ದು, ನವಿಲುಗಳು ನಿರಂತರ ಬಲಿಯಾಗುತ್ತಿವೆ. ಎಲ್ಲೆಂದರಲ್ಲಿ ಕಾಣಸಿಗುವ ನವಿಲುಗಳ ರಾಶಿ-ರಾಶಿ ರೆಕ್ಕೆ ಪುಕ್ಕಗಳು, ಸೊಗಸಾದ ಗರಿಗಳು ಇದಕ್ಕೆ ನಿದರ್ಶನವಾಗಿದೆ.
 
ಬಿಂಚಿಮಟ್ಟಿ ಗುಡ್ಡ ಪ್ರದೇಶದಲ್ಲಿ ಚಿರತೆಗಳ ಹಾವಳಿ ತಪ್ಪಿಸಬೇಕು, ದರೋಜಿಯಲ್ಲಿ ಕರಡಿಧಾಮದ ವ್ಯವಸ್ಥೆ ಮಾಡಿದಂತೆ ಮೆಟ್ರಿ, ಚಿನ್ನಾಪುರ, ದೇವಲಾಪುರ ಭಾಗದ ಗುಡ್ಡ ಪ್ರದೇಶಗಳಲ್ಲಿ ನೆಲೆಸಿರುವ ನವಿಲುಗಳ ರಕ್ಷಣೆಗೆ ವಿಶೇಷ ಪಕ್ಷಿಧಾಮ ಸ್ಥಾಪಿಸಬೇಕೆಂದು ಗ್ರಾಮದ ಜನತೆ ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ಆರೋಪ: ಕಳೆದ ಕೆಲ ತಿಂಗಳುಗಳ ಹಿಂದೆ ಬೇರೆ ಕಡೆಯಿದ್ದ ಚಿರತೆಗಳನ್ನು ನಮ್ಮ ಭಾಗದ ಗುಡ್ಡಗಳಿಗೆ ತಂದು ಬಿಡಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಚಿರತೆಗಳ ಸಂಖ್ಯೆ ಅಧಿಕವಾಗಿದ್ದು, ಅವುಗಳ ತಮ್ಮ ಆಹಾರಕ್ಕಾಗಿ ನವಿಲುಗಳನ್ನು ಬಲಿಪಡೆಯುತ್ತಿದ್ದು, ನವಿಲುಗಳ ಮಾರಣ ಹೋಮಕ್ಕೆ ಎಡೆಮಾಡಿಕೊಟ್ಟಂತಾಗಿದೆ ಎಂದು ಹಾಗೂ ಇದಕ್ಕೆ ಅರಣ್ಯ ಇಲಾಖೆಯೇ ಹೊಣೆಯಂದು ಗ್ರಾಮಸ್ಥರು ಆರೋಪಿಸಿದರು.

ಚಿನ್ನಾಪುರದ ಪಿಲುಗುಂಡು ಪ್ರದೇಶದಲ್ಲಿ ಆಹಾರ ಅರಸಿ ಬರುವ ನವಿಲುಗಳು ಚಿರತೆಗಳಿಗೆ ಬಲಿಯಾಗುತ್ತಿರಬಹುದು. ಶೀಘ್ರವಾಗಿ ಸ್ಥಳಕ್ಕೆ ಭೇಟಿ ನೀಡಿ ನವಿಲುಗಳ ಪಳಯುಳಿಕೆ, ಗರಿಗಳನ್ನು ಸಂಗ್ರಹಿಸಲಾಗುವುದು. ಬೇಸಿಗೆ ಹಿನ್ನೆಲೆಯಲ್ಲಿ ನವಿಲುಗಳು ವನ್ಯಜೀವಿಗಳು ವಲಸೆ ಹೋಗದಂತೆ ಸಿಮೆಂಟ್‌ ವಾಟರ್‌ ಹೊಲ್ಸ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ನವಿಲುಗಳ ರಕ್ಷಣೆಗೆ ಅರಣ್ಯ ಇಲಾಖೆ ಬದ್ಧವಾಗಿದೆ.
ವಿನೋಧ ನಾಯ್ಕ, ಕಮಲಾಪುರ  ವನ್ಯಜೀವಿ ವಲಯ ಅರಣ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next