Advertisement
ಅರಣ್ಯದ ಅಂಚಿನಲ್ಲಿವವರಲ್ಲಿ ಈ ಸೋಂಕು ಬೇಗ ಹರಡುವ ಸಂಭವ ಹೆಚ್ಚು. ಬೇಸಗೆಯಲ್ಲಿ ಕಾಡಿಗೆ ಸೌದೆ, ಸೊಪ್ಪು ತರಲೆಂದು ತೆರಳುವವರಿಗೆ ವೈರಾಣುವಿನ ಮೂಲಕ ರೋಗ ಹರಡುವ ಸಾಧ್ಯತೆಯಿದೆ. ಮಂಗ, ಬಾವಲಿಗಳು ಕೆಎಫ್ಡಿ ಸೋಂಕಿನಿಂದ ಬಳಲುತ್ತಿದ್ದರೆ ಅಥವಾ ಸತ್ತಿದ್ದರೆ ಅಂವುಗಳ ರಕ್ತ ಹೀರುವ ಉಣ್ಣೆಗಳು ಮನುಷ್ಯನಿಗೆ ಕಚ್ಚಿದರೆ ನಾಲ್ಕೈದು ದಿನಗಳಲ್ಲಿ ಅಂತಹವರು ಮಂಗನ ಕಾಯಿಲೆಗೆ ತುತ್ತಾಗುತ್ತಾರೆ. ಸದ್ಯ ಮಾನವನಿಗೆ ಸೋಂಕು ಹರಡಿದ ಪ್ರಕರಣ ತಾಲೂಕಿನಲ್ಲಿ ಇಲ್ಲವಾದರೂ ಮುಂಜಾಗ್ರತೆ ಅಗತ್ಯವೆಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ಮಂಗನ ಕಾಯಿಲೆ ಸೋಂಕು ತಗುಲಿದರೆ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ವಾರದ ತನಕವೂ ಇರುತ್ತದೆ. ಚಳಿ, ಜ್ವರ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ನಂತರ ಕಡಿಮೆ ರಕ್ತದೊತ್ತಡ, ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುವುದು, ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳು ಕಾಣಿಸಿ ಕೊಳ್ಳುತ್ತವೆ. ಇಂತಹ ಲಕ್ಷಣ ಕಂಡು ಬಂದಲ್ಲಿ ತತ್‌ಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಿ ಪರಿಣಮಿಸಬಹುದು.
ಕಾರ್ಕಳ ತಾಲೂಕಿನ 27 ಗ್ರಾ.ಪಂ ವ್ಯಾಪ್ತಿಯ 39 ಗ್ರಾಮಗಳು , ಹೆಬ್ರಿ ತಾಲೂಕಿನ 16 ಗ್ರಾಮಗಳಲ್ಲಿ ಮಂಗನ ಕಾಯಿಲೆ ನಿರ್ವಹಣೆಗಾಗಿ ಸಮಿತಿ ಈಗಾಗಲೇ ಕಾರ್ಯಾಚರಿಸುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮರ್ಣೆ ಗ್ರಾಮದಲ್ಲಿ ಸತ್ತ ಮಂಗನ ಮೃತದೇಹದಲ್ಲಿ ಫ್ಲಾವಿವಿರಿಡೆ ವೈರಸ್ ಪತ್ತೆ ಹಚ್ಚಲಾಗಿದೆ. ಮನುಷ್ಯನಿಗೆ ಹರಡಿದ ಪ್ರಕರಣ ಗಳು ಇದುವರೆಗೂ ದಾಖಲಾಗಿಲ್ಲ. ನಾಗರಿಕರು ಮುನ್ನೆಚ್ಚರಿಕೆ ವಹಿಸು ವುದು ಆವಶ್ಯಕ. ಜ್ವರ ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ತಾಲೂಕು ಆಸ್ಪತ್ರೆ ಯಲ್ಲಿ ಪ್ರತ್ಯೇಕ ಬೆಡ್‌ಗಳನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ.
– ಡಾ| ಸಂದೀಪ್ ಕುಡ್ವಾ,
ತಾಲೂಕು ವೈದ್ಯಾಧಿಕಾರಿ ಕಾರ್ಕಳ