ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ಮಂಗಳ ವಾರ ಸಂಜೆ ವ್ಯಕ್ತಿಯೋರ್ವ ಮೃತ ಪಟ್ಟಿದ್ದು ಸಾವಿಗೆ ಸಿಡಿಲು ಬಡಿತ ಕಾರಣ ಎಂಬ ವದಂತಿ ಹಬ್ಬಿ ಕೊನೆಗೆ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಕಾರಣ ತೀರ್ಮಾನಿಸಲು ನಿರ್ಧರಿಸಿದ್ದಾರೆ.
ಕೂಲಿ ಕಾರ್ಮಿಕ ದರ್ಬೆತ್ತಡ್ಕ ನಿವಾಸಿ ಪಿ. ಬಾಬು (55) ಮೃತಪಟ್ಟವರು. ತನ್ನ ಮನೆ ಪರಿಸರದಲ್ಲಿ ಸಂಜೆ ವೇಳೆ ಕೆಲಸ ಮಾಡುತ್ತಿದ್ದ ಸಂದರ್ಭ ಸಾವು ಸಂಭವಿಸಿದೆ.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಹೃದಯಾಘಾತದ ಶಂಕೆ : ಮೇ 21ರಂದು ಸಂಜೆ 7 ಗಂಟೆ ಹೊತ್ತಿಗೆ ಬಾಬು ಅವರು ಸಿಡಿಲಿನ ಆಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಾಲೂಕು ಆಡಳಿತಕ್ಕೆ ತಲುಪಿತ್ತು. ವಿಷಯ ತಿಳಿದ ತಹಶಿಲ್ದಾರ್ ಕುಂಞಿ ಅಹ್ಮದ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಪರಿಸರದಲ್ಲಿ ಸಿಡಿಲು ಬಿದ್ದಿರುವ ಅಥವಾ ಆಘಾತದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಮೃತರ ದೇಹದ ಮೇಲೂ ಗಾಯಗಳು ಇರಲಿಲ್ಲ. ಹೀಗಾಗಿ ಸಿಡಿಲಾಘಾತದ ಸಾವು ಅನ್ನುವ ಬಗ್ಗೆ ಅನುಮಾನ ಮೂಡಿತ್ತು. ಪೂರಕ ಸಾಕ್ಷಿಗಳು ಇಲ್ಲದ ಕಾರಣ ಮರಣೋತ್ತರ ಪರೀಕ್ಷೆಗೆ ತೀರ್ಮಾನಿಸಲಾಯಿತು. ತಾಲೂಕು ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಮಂದಿ ಹೇಳುವುದೇನು? ಮನೆ ಮಂದಿಯ ಪ್ರಕಾರ, ಬಾಬು ಸಂಜೆ 4.30ರ ವೇಳೆಗೆ ಅಂಗಳದಲ್ಲಿ ಕಟ್ಟಿಗೆ ತುಂಡರಿಸುತ್ತಿದ್ದರು. ಆಗ ಗುಡುಗಿನ ಸದ್ದು ಕೇಳಿಸಿದ್ದು, ಅವರು ಓಡಿ ಬಂದ ಮನೆಯೊಳಗೆ ಮೃತಪಟ್ಟರು. ಸಂಜೆ 4.30ಕ್ಕೆ ಸಿಡಿಲು ಬಡಿದಿದ್ದರೂ ತಾಲೂಕು ಆಡಳಿತಕ್ಕೆ 7ರ ಹೊತ್ತಿಗೆ ಮಾಹಿತಿ ನೀಡಿರುವುದು ಸಂಶಯಕ್ಕೆ ಕಾರಣ.