ಮಹಾನಗರ: ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷ ಪ್ರಾಯದ ಹನುಮಾನ್ ಲಂಗೂರ್ “ರಾಜು’ ಮೃತಪಟ್ಟಿದೆ.
ಪಿಲಿಕುಳ ಮೃಗಾಲಯದ ಆರಂಭದ ದಿನಗಳಲ್ಲಿ ರಾಜುವನ್ನು ಪಡುಬಿದ್ರಿಯ ಬಾರ್ ಒಂದರಿಂದ ರಕ್ಷಿಸಲಾಗಿತ್ತು. ಮಾಲಕ ಮತ್ತು ಗಿರಾಕಿಗಳಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ “ರಾಜು’ ಮದ್ಯಪಾನದ ಚಟ ಅಂಟಿಸಿಕೊಂಡು ಅನಾರೋಗ್ಯಕ್ಕೆ ಈಡಾ ಗಿತ್ತು. ಅದನ್ನು ಪಿಲಿಕುಳಕ್ಕೆ ತರಲಾಗಿತ್ತು.
ಮೃಗಾಲಯದಲ್ಲಿ ನಿಧಾನವಾಗಿ ಅಮಲು ಸೇವನೆಯ ಅಭ್ಯಾಸವನ್ನು ಬಿಡಿಸಿ ವಿವಿಧ ಜಾತಿಯ ಹಣ್ಣು ಹಂಪಲುಗಳನ್ನು ಸೇವಿಸಲು ಒಗ್ಗಿಕೊಂಡಿತ್ತು ಮತ್ತು ಮೃಗಾಲಯದ ಸಂದರ್ಶಕರಿಗೆ ಬಹಳ ಆಕರ್ಷಕವಾಗಿ ಪ್ರೀತಿಪಾತ್ರವಾಗಿತ್ತು.
ಇದನ್ನೂ ಓದಿ:ರಸ್ತೆ ಬದಿ ನಿಲ್ಲಿಸಿಟ್ಟಿದ್ದ ಟ್ರಕ್ ಗಳ ಗಾಳಿ ತೆಗೆದು ಎಚ್ಚರಿಕೆ ನೀಡಿದ ಪೊಲೀಸರು
ಪ್ರಸ್ತುತ ಪಿಲಿಕುಳ ಮೃಗಾಲಯದಲ್ಲಿ ನಾಲ್ಕು ಹನುಮಾನ್ ಲಂಗೂರ್‌ಗಳಿದ್ದು ಅವುಗಳಿಗಾಗಿ ವಿಶಾಲವಾದ ತೆರೆದ ಮರ ಮಟ್ಟುಗಳಿಂದ ಕೂಡಿದ ಆವರಣವನ್ನು ನಿರ್ಮಿಸಲಾಗಿದೆ. ಹನುಮಾನ್ ಲಂಗೂರ್‌ಗಳ ಸಾಮಾನ್ಯ ಆಯಸ್ಸು 18-20 ವರ್ಷ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.