ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಾಮ್ರಾಜ್ಯವಾದ ‘ಡಿ ಕಂಪನಿ’ಯಲ್ಲಿ 2ನೇ ದಾವೂದ್ ಎಂದೇ ಗುರುತಿಸಿಕೊಂಡಿದ್ದ ಫಾರೂಕ್ ದೇವ್ಡಿವಾಲಾ ನನ್ನು ಇದೇ ಡಿ ಕಂಪನಿಯ ಸದಸ್ಯರೇ ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ದಾವೂದ್‌ನನ್ನು ಭಾರತಕ್ಕೆ ಹಿಡಿದು ಕೊಡಲು ಭಾರತೀಯ ಅಧಿಕಾರಿಗಳ ಜತೆಗೆ ಕೈ ಜೋಡಿಸಿರುವ ಅನುಮಾನಗಳು ಎದ್ದ ಹಿನ್ನೆಲೆಯಲ್ಲಿ ಈತನ ಹತ್ಯೆ ನಡೆದಿದೆ ಎನ್ನಲಾಗಿದೆ. ಆದರೆ, ಇದಿನ್ನೂ ಖಚಿತವಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅಸಲಿಗೆ, ಫಾರೂಕ್ ದೇವ್ಡಿವಾಲಾ, ಭಾರತಕ್ಕೂ ಬೇಕಾಗಿದ್ದ ಪಾತಕಿ. ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಯುವಕರನ್ನು ಸೇರಿಸಿದ ಆರೋಪ ಈತನ ಮೇಲಿದೆ. ಈತನ ಹಸ್ತಾಂತರಕ್ಕೆ ಭಾರತ ಪ್ರಯತ್ನಿಸುತ್ತಲೇ ಇದೆ. ಇದೇ ವೇಳೆ, ದಾವೂದ್‌ನ ಬಂಧನಕ್ಕೆ ನೆರವು ನೀಡುವುದಾಗಿ ಆತ ಭಾರತೀಯ ಅಧಿಕಾರಿಗಳಿಗೆ ಮಾತು ನೀಡಿದ್ದ ಎನ್ನಲಾಗಿದ್ದು, ಈ ವಿಚಾರ ತಿಳಿಯು ತ್ತಿದ್ದಂತೆ ದಾವೂದ್ ಸಹಚರ ಛೋಟಾ ಶಕೀಲ್ ಈತನ ಹತ್ಯೆಗೆ ಆದೇಶಿಸಿದ್ದ ಎಂದು ಅಂದಾಜಿಸಲಾಗಿದೆ.