ಬಳ್ಳಾರಿ: ಕೋವಿಡ್-19 ತಡೆ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದ ಆಶಾ ಕಾರ್ಯಕರ್ತೆ ಕೆ. ಸಾಕಮ್ಮ (51) ಸೋಮವಾರ ಮೃತಪಟ್ಟಿ ದ್ದಾರೆ. ಕೆಲಸದ ಒತ್ತಡದಿಂದಲೇ ಮೃತಪಟ್ಟಿದ್ದಾರೆಂದು ಕುಟುಂಬ ದವರು ಆರೋಪಿಸುತ್ತಿದ್ದು, ವೈದ್ಯರು ಮಾತ್ರ ಸಾಕಮ್ಮ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಿದ್ದಾರೆ.
ಸಾಕಮ್ಮ ಅವರು ಲಾಕ್‌ಡೌನ್ ಘೋಷಣೆ ಆದಾಗಿನಿಂದ ನಿರಂತರವಾಗಿ ಜಾಗೃತಿ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಲಸದ ಒತ್ತಡದಲ್ಲಿ ಅನಾರೋಗ್ಯಕ್ಕೆ ಗುರಿಯಾಗಿರುವ ಅವರು, 2 ದಿನಗಳ ಹಿಂದಷ್ಟೇ ಗ್ರಾಮದಲ್ಲಿ ಕುಸಿದುಬಿದ್ದಿದ್ದಾರೆ. ಆಗ ಅಲ್ಲಿಯೇ ಇದ್ದ ಜನ ಇವರನ್ನು ಸಮಾಧಾನಪಡಿಸಿ, ನೀರು ಕುಡಿಸಿ ಮನೆಗೆ ಕಳುಹಿಸಿದ್ದಾರೆ. ಮರುದಿನ ಪುನಃ ಕೆಲಸಕ್ಕೆ ಹಾಜರಾಗಿದ್ದು, ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ.
ಕೂಡಲೇ ಆ್ಯಂಬುಲೆನ್ಸ್ ನಲ್ಲಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ವಿಮ್ಸ್ ನಿರ್ದೇಶಕ ಡಾ|ಬಿ. ದೇವಾನಂದ್ ಪ್ರತಿಕ್ರಿಯಿಸಿ, ಸಿಂಕೋಪಲ್ ಅಟ್ಯಾಕ್‌ನಿಂದ (ತಲೆ ಸುತ್ತು) ಕುಸಿದು ಬಿದ್ದಿದ್ದಾರೆ. ಕೂಡಲೇ ವಿಮ್ಸ್‌ಗೆ ಕರೆತರಲಾಗಿದ್ದು, ಇಲ್ಲಿಗೆ ಬರುವುದರೊಳಗೆ ಮೃತಪಟ್ಟಿದ್ದರು. ಕೋವಿಡ್-19 ಜಾಗೃತಿ ಕಾರ್ಯದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಸ್ಯಾಂಪಲ್ ಗಳನ್ನು ಪಡೆದು ಕೊರೊನಾ ಟೆಸ್ಟಿಂಗ್‌ಗೆ ಕಳುಹಿಸಲಾಗಿತ್ತು.
ಆಗ ವಿಮ್ಸ್‌ನಲ್ಲಿನ ಟೆಸ್ಟಿಂಗ್ ಲ್ಯಾಬ್ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ. ಕುಟುಂ ಬಸ್ಥರಿಗೆ ಮೃತದೇಹ ಒಪ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ
ರಿಹಾರ-ಉದ್ಯೋಗಕ್ಕಾಗಿ ಬೇಡಿಕೆ: ಈ ಮಧ್ಯೆ ಸಾಕಮ್ಮ ಕೆಲಸದ ಒತ್ತಡದಿಂದಲೇ ಮೃತಪಟ್ಟಿದ್ದಾರೆಂದು ಆರೋಪಿಸಿರುವ ಅವರ ಮಗ ಕೆ.ಮಂಜುನಾಥ್, ಸೂಕ್ತ ಪರಿಹಾರ, ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲಿವರೆಗೂ ಆಸ್ಪತ್ರೆಯಿಂದ ಮೃತದೇಹ ಕೊಂಡೊಯ್ಯುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸುವುದು ವಿಳಂಬವಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಡೀಸಿ ಕಚೇರಿ ಎದುರು ಧರಣಿ ನಡೆಸುವುದಾಗಿಯೂ ಮನವಿಯಲ್ಲಿ ತಿಳಿಸಿದ್ದಾರೆ. ಜತೆಗೆ 50 ಲಕ್ಷ ರೂ. ಆರೋಗ್ಯ ವಿಮೆಯ ಸೌಲಭ್ಯ ಕಲ್ಪಿಸಬೇಕೆಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಆಗ್ರಹಿಸಿದ್ದಾರೆ.