ಕನಕಪುರ: ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಆಂಥ್ಯಾಮ್ ಬಯೋಸೈನ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ವತ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕನಕಪುರ ತಾಲೂಕು ಗೊಟ್ಟಿಗೆಹಳ್ಳಿಯ ಮಹೇಶ್, ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಲೋಕೇಶ ಹಾಗೂ
ತಮಿಳುನಾಡಿನ ಶರವಣ ಮೃತ ಕಾರ್ಮಿಕರು. ತಮಿಳುನಾಡು ಮೂಲದ ಮತ್ತೂಬ್ಬ ಕಾರ್ಮಿಕ ಹರಿಲಿಘನ್ ತೀವ್ರ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರೆಲ್ಲ ನಿರ್ವಹಣಾ ವಿಭಾಗದ ಸಿಬ್ಬಂದಿ ಎನ್ನಲಾಗಿದೆ.
ಆಂಥ್ಯಾಮ್ ಬಯೋಸೈನ್ ಕಾರ್ಖಾನೆ ಔಷಧ ತಯಾರಿಸುತ್ತದೆ. ಸ್ವತ್ಛತೆ ಕಾರ್ಯಕ್ಕಾಗಿ ನಾಲ್ವರು ಕಾರ್ಮಿಕರು ಬಾಯ್ಲರ್‌ಗೆ ಇಳಿದಿದ್ದು, ಕೆಲ ಹೊತ್ತಿನಲ್ಲಿ ಆಮ್ಲಜನಕದ ಕೊರತೆಯಾಗಿ ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ ಇತರೆ ಕಾರ್ಮಿಕರು ರಕ್ಷಣೆಗೆ ಹೋಗುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು.
ಅಸ್ವಸ್ಥಗೊಂಡಿದ್ದ ಹರಿಲಿಘನ್‌ನನ್ನು ರಕ್ಷಿಸಿ ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸದೆ ಸಿಬ್ಬಂದಿಯನ್ನು ಬಾಯ್ಲರ್‌ಗೆ ಇಳಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಹಾರೋಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಧಿಕಾರಿ ತಡೆದ ಸಿಬ್ಬಂದಿ: ಅವಘಡದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಕೈಗೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ತೆರಳಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಲೋಕೇಶ್ ಅವರನ್ನು ಗೇಟ್ ಬಳಿಯೇ ತಡೆದ ರಕ್ಷಣಾ ಸಿಬ್ಬಂದಿ, ಅರ್ಧ ಗಂಟೆ ನಂತರ ಒಳಗೆ ಬಿಟ್ಟಿದ್ದಾರೆ. ವಿಷಯ ತಿಳಿದ ಕೂಡಲೆ ಎಸ್ಪಿ ರಮೇಶ್,
ಡಿವೈಎಸ್ಪಿ ಎಂ.ಕೆ.ತಮ್ಮಯ್ಯ, ಕಾರ್ಮಿಕ ಅಧಿಕಾರಿ ಯತೀಶ್ ಕಾರ್ಖಾನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಕಾರ್ಮಿಕರ ಜೀವಕ್ಕಿಲ್ಲ ಬೆಲೆ
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ವಿವಿಧ ಕಾರ್ಖಾನೆಗಳಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಕಾರ್ಮಿಕರು ಮೃತಪಡುವ ಘಟನೆಗಳು ಮರುಕಳಿಸುತ್ತಲೇ ಇವೆ. ಆರು ತಿಂಗಳ ಹಿಂದೆ ಪ್ಯಾಕೇಜಿಂಗ್ ಘಟಕದಲ್ಲಿ ನೀರಿನ ಸಂಪ್ ಸ್ವತ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಬಹುತೇಕ ಘಟನೆಗಳಿಗೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ದೂರಿರುವ ಕೆಲ ಕಾರ್ಖಾನೆಗಳ ಕಾರ್ಮಿಕರು, ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದೆ ಕಾರ್ಮಿಕರನ್ನು ಅಪಾಯಕಾರಿ ಕೆಲಸಕ್ಕೆ ಹಚ್ಚುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.