Advertisement
ಶನಿವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ಉತ್ತಮ ಆರಂಭ ಪಡೆದಿತ್ತು. 15 ಓವರ್ ಮುಗಿದಾಗ ತಂಡದ ಮೊತ್ತ 147 ತಲುಪಿತ್ತು. ಆದರೆ ಕೊನೇ ಹಂತದಲ್ಲಿ ಪ್ರಸಿದ್ಧ್ ಕೃಷ್ಣ ಮಾರಕ ದಾಳಿ ಸಂಘಟಿಸಿದ್ದರಿಂದ ತಂಡದ ಮೊತ್ತ 9 ವಿಕೆಟಿಗೆ 172ಕ್ಕೆ ನಿಯಂತ್ರಿಸಲ್ಪಟ್ಟಿತ್ತು.
ಇದಕ್ಕುತ್ತರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್ ತಂಡವು ಇನ್ನೆರಡು ಎಸೆತ ಬಾಕಿ ಇರುತ್ತಲೇ 173 ರನ್ ಪೇರಿಸಿ ಜಯಭೇರಿ ಬಾರಿಸಿತಲ್ಲದೇ 3ನೇ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಯಿತು. ಈ ಮೊದಲು ಹೈದರಾಬಾದ್ ಮತ್ತು ಚೆನ್ನೈ ಪ್ಲೇ ಆಫ್ಗೆ ಪ್ರವೇಶಿಸಿತ್ತು. ಇನ್ನಿಂಗ್ಸ್‌ನ ಕೊನೇ ಹಂತದಲ್ಲಿ ನಾವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ಪ್ರಸಿದ್ಧ್ (4-0-30-4) ಅಮೋಘ ಬೌಲಿಂಗ್ ನಡೆಸಿದ್ದರು. ಡೆತ್ ಓವರ್ ವೇಳೆ ಎಲ್ಲ ಬೌಲರ್‌ಗಳು ನಿಖರ ದಾಳಿ ಸಂಘಟಿಸಿದ್ದರು ಎಂದು ಪಂದ್ಯದ ಬಳಿಕ ಗಿಲ್ ತಿಳಿಸಿದರು.
Related Articles
ಈ ಸೋಲಿನಿಂದ ನಾಕೌಟ್ ಹಂತದ ಹೋರಾಟದಲ್ಲಿ ನಮ್ಮ ಪ್ರಯತ್ನಕ್ಕೆ ಯಾವುದೇ ತೊಂದರೆಯಾಗದು ಎಂದು ಹೈದರಾಬಾದ್ ತಂಡದ ಆಟಗಾರ ಶ್ರೀವಸ್ತ ಗೋಸ್ವಾಮಿ ಹೇಳಿದ್ದಾರೆ.
ಹೈದರಾಬಾದ್ ಮೇ 22ರಂದು ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಈ ಪಂದ್ಯದ ವೇಳೆ ಹಿಂದಿನ ಸೋಲು ನೆನಪಾಗುವ ಸಾಧ್ಯತೆಯಿಲ್ಲ. ಕ್ವಾಲಿಫೈಯರ್ ಪಂದ್ಯಕ್ಕಾಗಿ ಪ್ರತಿಯೊಬ್ಬರು ಪೂರ್ಣ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಬರಲಿದ್ದಾರೆ. ನಾವು ಮೂರು ಪಂದ್ಯದಲ್ಲಿ ಸೋತಿದ್ದೇವೆ. ಅದರ ಬಗ್ಗೆ ಎಚ್ಚರವಿದೆ ಎಂದ ಅವರು ನಮ್ಮ ಶಕ್ತಿ ಮತ್ತು ದೌರ್ಬಲ್ಯವನ್ನು ಪರಿಶೀಲಿಸಿ ಪ್ಲೇ ಆಫ್ ಹೋರಾಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಲು ಪ್ರಯತ್ನಿಸಲಿದ್ದೇವೆ ಎಂದರು.
Advertisement
ತವರಿನಲ್ಲಿ ಎಲಿಮಿನೇಟರ್ ಪಂದ್ಯಕೆಕೆಆರ್ ತಂಡವು ತವರಿನಲ್ಲಿಯೇ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದೆ. ಈ ಪಂದ್ಯ ಮೇ 23ರಂದು ನಡೆಯಲಿದೆ. ತವರಿನಲ್ಲಿ ಆಡುವುದು ಯಾವಾಗಲೂ ಯಾವುದೇ ತಂಡಕ್ಕೂ ಒಳ್ಳೆಯ ಅವಕಾಶ. ತವರಿನಲ್ಲಿ ಆಡಿದರೆ ಅನುಕೂಲಗಳು ಹೆಚ್ಚು, ಪ್ರೇಕ್ಷಕರು ಬಹಳಷ್ಟು ಪ್ರೋತ್ಸಾಹ ನೀಡುತ್ತಾರೆ. ಪಿಚ್ ಬಗ್ಗೆಯೂ ಹೆಚ್ಚು ತಿಳಿದಿರುತ್ತದೆ ಮತ್ತು ಎದುರಾಳಿಯನ್ನು ಯಾವ ರೀತಿ ಕಟ್ಟಿಹಾಕಬಹುದೆಂಬುದನ್ನು ತಿಳಿಯಬಹುದು ಎಂದು ಗಿಲ್ ತಿಳಿಸಿದರು. ಎಕ್ಸ್‌ಟ್ರಾ ಇನ್ನಿಂಗ್ಸ್
– ಟಿ20 ಮಾದರಿಯಲ್ಲಿ 2017ರ ಮೇ ಬಳಿಕ ರನ್ ಚೇಸ್ ಮಾಡಿ ಯಶಸ್ಸು ಸಾಧಿಸಿದ ವೇಳೆ ದಿನೇಶ್ ಕಾರ್ತಿಕ್ ಕೇವಲ ಎರಡು ಬಾರಿ ಔಟಾಗಿದ್ದಾರೆ. 12 ಬಾರಿ ಯಶಸ್ವಿ ಚೇಸ್ ವೇಳೆ ಅವರು 10 ಬಾರಿ ಅಜೇಯರಾಗಿ ಉಳಿದಿದ್ದಾರೆ. ಈ ವೇಳೆ ಅವರು 392 ರನ್ ಗಳಿಸಿದ್ದಾರೆ.
– ಕೋಲ್ಕತಾ ವಿರುದ್ಧ ಸೋತಿರುವುದು ಈ ಐಪಿಎಲ್‌ನಲ್ಲಿ ಹೈದರಾಬಾದ್‌ನ ಸತತ ಮೂರನೇ ಸೋಲು ಆಗಿದೆ. ಅವರು ಈ ಹಿಂದೆ 2015 ಮತ್ತು 2016ರ ಋತುವಿನ ನಡುವೆ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದರು. ಬೆನ್ನುಬೆನ್ನಿಗೆ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ 2015ರ ಋತು ಮುಗಿಸಿದ್ದ ಹೈದರಾಬಾದ್ 2016ರ ಋತುವಿನ ಆರಂಭದ ಎರಡು ಪಂದ್ಯಗಳಲ್ಲೂ ಸೋತಿದ್ದರು.
– ಹೈದರಾಬಾದ್ ನೆಲದಲ್ಲಿ ಕೆಕೆಆರ್ ತಂಡವು ಹೈದರಾಬಾದ್ ತಂಡವನ್ನು ಮೂರು ಬಾರಿ ಸೋಲಿಸಿರುವುದು ಯಾವುದೇ ತಂಡದ ಗರಿಷ್ಠ ಸಾಧನೆಯಾಗಿದೆ. ಚೆನ್ನೈ, ಮುಂಬೈ ಮತ್ತು ಪುಣೆ ತಂಡ ಈ ಹಿಂದೆ ತಲಾ ಎರಡು ಬಾರಿ ಹೈದರಾಬಾದ್ ತಂಡವನ್ನು ಸೋಲಿಸಿತ್ತು.
– ಸುನೀಲ್ ನಾರಾಯಣ್ ಐಪಿಎಲ್‌ನ ಋತುವೊಂದರಲ್ಲಿ 300 ಪ್ಲಸ್ ರನ್ ಮತ್ತು 15 ಪ್ಲಸ್ ವಿಕೆಟ್ ಪಡೆದ ನಾಲ್ಕನೇ ಆಟಗಾರರಾಗಿದ್ದಾರೆ. ಈ ಸಾಧನೆಯನ್ನು 2008ರಲ್ಲಿ ಶೇನ್ ವಾಟ್ಸನ್ ಮೊದಲಿಗರಾಗಿ ಮಾಡಿದ್ದರು. 2013ರಲ್ಲಿ ಡ್ವೇನ್ ಬ್ರಾವೊ ಮತ್ತು 2012 ಮತ್ತು 2013ರಲ್ಲಿ ಜಾಕ್ ಕ್ಯಾಲಿಸ್ ಕೆಕೆಆರ್ ತಂಡದ ಪರ ಎರಡು ಬಾರಿ ಈ ಸಾಧನೆ ಮಾಡಿದ್ದರು.
– ಪ್ರಸಿದ್ಧ್ ಕೃಷ್ಣ ಕೆಕೆಆರ್ ಪರ ಐಪಿಎಲ್‌ನಲ್ಲಿ ನಾಲ್ಕು ವಿಕೆಟ್ ಕಿತ್ತಿರುವುದು ಭಾರತ ಪರ ಆಡದ ಮೊದಲ ಆಟಗಾರರಾಗಿದ್ದಾರೆ. ಹೈದರಾಬಾದ್ ವಿರುದ್ಧ ಕೆಕೆಆರ್ ಪರ ಕೆಲವು ಮಂದಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದಾರೆ.
– ತವರಿನ ಪಂದ್ಯದಲ್ಲಿ 160 ಪ್ಲಸ್ ಮೊತ್ತ ಪೇರಿಸಿದ ವೇಳೆ ಆ ಮೊತ್ತವನ್ನು ಸಮರ್ಥಿಸಿಕೊಳ್ಳಲು ಹೈದರಾಬಾದ್ ವಿಫಲವಾಗಿರುವುದು ಇದು ಎರಡನೇ ಸಲವಾಗಿದೆ. 2014ರ ಋತುವಿನಲ್ಲಿ ಪಂಜಾಬ್ ವಿರುದ್ಧ ಹೈದರಾಬಾದ್ 5 ವಿಕೆಟಿಗೆ 205 ರನ್ ಪೇರಿಸಿಯೂ ಸೋತಿತ್ತು.
– ಈ ಐಪಿಎಲ್‌ನಲ್ಲಿ ಕ್ರಿಸ್ ಲಿನ್ 425 ರನ್ ಪೇರಿಸಿದ್ದಾರೆ. ಇದು ಕೆಕೆಆರ್ ಪರ ವಿದೇಶಿ ಆಟಗಾರನೋರ್ವನ ಶ್ರೇಷ್ಠ ಸಾಧನೆಯಾಗಿದೆ. 2011ರ ಋತುವಿನಲ್ಲಿ ಜಾಕ್ ಕ್ಯಾಲಿಸ್ 424 ರನ್ ಗಳಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.