Advertisement
ಜಗತ್ತಿನಲ್ಲಿ ಬದುಕಿನ ಮಾಯೆಯ ಸ್ವರೂಪಕ್ಕೆ ಮರುಳಾದ ಹಾಗೆ ಸಾವಿನ ರಹಸ್ಯಕ್ಕೆ ಬೆರಗಾಗುವ ಜನರ ಸಂಖ್ಯೆ ಕಡಿಮೆ ಇದೆ. ಮನುಷ್ಯನ ಬದುಕಿಗೆ ಅಂತ್ಯ ಹಾಡಿ ಮುಚ್ಚಿಕೊಳ್ಳುವ ಸಾವಿನ ಬಾಗಿಲ ಹಿಂದೆ ಏನಿದೆ ಎಂಬ ರಹಸ್ಯ ಈವರೆಗೂ ಮನುಷ್ಯನ ಪ್ರಜ್ಞೆಗೆ ಎಟಕಿಲ್ಲ. ಆತ್ಮ ದೇಹವನ್ನು ತೊರೆದಾಗ ಸಾವು ಸಂಭವಿಸುತ್ತದೆ ಎಂಬ ನಂಬಿಕೆ ಇದ್ದರೂ ಆತ್ಮ ಎಂದರೇನು, ಅದು ಎಲ್ಲಿರುತ್ತದೆ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಸಾವಿನ ಬಗ್ಗೆ ಜಗತ್ತಿನ ಧರ್ಮಗಳು ಹೊಂದಿರುವಷ್ಟು ಸಿದ್ಧಾಂತಗಳು ಮತ್ತು ನಿರ್ಣಯಗಳನ್ನು ವಿಜ್ಞಾನ ಹೊಂದಿಲ್ಲ. ದೇಹದ ಅಂಗಾಂಗಗಳಿಗೆ ವಯಸ್ಸಾಗಿ ಅವುಗಳ ಜೈವಿಕ ಕ್ರಿಯೆಗಳು ನಿಲ್ಲುವ ಸ್ಥಿತಿಯೇ ಸಾವು ಎಂಬುದು ಭಾವಗೋಚರವಾದ ವೈಜ್ಞಾನಿಕ ಸತ್ಯ. ಹಾಗೆಯೇ ಸಾವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬುದು ಜಗತ್ತಿನ ಪರಮ ಸತ್ಯ!
ಸಾವು ಎಂಬುದು ಮನುಷ್ಯನಿಗೆ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಸಾವಿನ ನಂತರದ ಜಗತ್ತಿನ ಪ್ರವೇಶವನ್ನು ಧಾರ್ಮಿಕ ಕ್ರಿಯೆಯಾಗಿ ಅಥವಾ ವೈಜ್ಞಾನಿಕ ರೂಪಾಂತರ ಎಂಬುದಾಗಿ ವರ್ಗೀಕರಿಸಲು ಸಾಧ್ಯವಿಲ್ಲ ! ಸಾವಿನಿಂದ ಆರಂಭವಾಗಿ ಮತ್ತೂಂದು ಭ್ರೂಣದವರೆಗೆ ಇರುವ ಬೃಹತ್ ಕಂದರದ ಹರಹು ಮಾನವನ ಅನುಭವದ ವ್ಯಾಪ್ತಿಗೆ ಮೀರಿದ್ದು. ಪ್ರಜ್ಞೆ , ಪ್ರಾಣ, ಆತ್ಮ, ಚೈತನ್ಯ, ಸತ್ವ ಎಂದು ಕರೆಯಲಾಗುವ ಅಂತರ್ಭಾವವು ಸಾವಿನ ನಂತರ ದೇಹವನ್ನು ತೊರೆದು ಪೂರ್ವಜನ್ಮದ ಸಂಚಿತ ಕರ್ಮಗಳನ್ನು ತೀರಿಸಿ ಮೋಕ್ಷ ಹೊಂದುವ ದಾರಿಯಲ್ಲಿನ ಏಕಾಂಗಿ ಪ್ರಯಾಣದ ಅನುಭವವನ್ನು ಗ್ರಹಿಸಲು ಸಾಧ್ಯವಿಲ್ಲ. ಇದೇ ಮನುಷ್ಯನಿಗೆ ಸಾವಿನ ಬಗ್ಗೆ ಕುತೂಹಲ ಮತ್ತು ಭಯವನ್ನು ಉಂಟುಮಾಡುವ ಪ್ರಮುಖ ಅಂಶ. ಮನುಷ್ಯ ತನ್ನ ಪ್ರಜ್ಞಾಪೂರ್ವಕ ಜ್ಞಾನದ ನೆರವಿನಿಂದ ಬದುಕಿನ ಪರಿಧಿಯನ್ನು ರಚಿಸಿಕೊಂಡು ಅದರಲ್ಲೇ ಬದುಕುತ್ತಾನೆ. ತನ್ನ ಸುಖದ ಕೋಶವನ್ನು ತೊರೆದು ಅರಿಯದ ಜಗತ್ತಿಗೆ ಹೊಂದಿಕೊಳ್ಳಲಾಗದ ಮನುಷ್ಯ ಪ್ರಜ್ಞೆ ಸಾವಿನ ನಂತರ ದಿಕ್ಕೆಟ್ಟು ಹೋಗುತ್ತದೆ. ತನ್ನದೇ ದೇಹದ ಒಳಗೆ ಇನ್ನೂ “ಇರಲು’ ಬಯಸುತ್ತದೆ. ಅಂತಹ ಸಂದರ್ಭಗಳಲ್ಲಿ ಸಾವಿನ ಅನಿವಾರ್ಯತೆಯನ್ನು ತಿಳಿಸಿ ಪ್ರಜ್ಞೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಒಂದು ಗೈಡಿಂಗ್ ಫೋರ್ಸ್ ಬೇಕಾಗುತ್ತದೆ.
Related Articles
Advertisement
ಗರುಡ ಪುರಾಣ ಮತ್ತು ಟಿಬೆಟಿನ ಸತ್ತವರ ಪುಸ್ತಕ ಭಾರತೀಯ ಮೂಲದ ತಂತ್ರ, ಸಿದ್ಧಿ ಮತ್ತು ಕುಂಡಲಿನಿ ಶಕ್ತಿಗಳನ್ನು ಆಧರಿಸಿದವು. ಕಾಳಿಕಾಗಮದಲ್ಲಿ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳಲು ಬೇಕಾದ ಮಂತ್ರ-ತಂತ್ರಗಳನ್ನು ಅಭ್ಯಸಿಸುವವನನ್ನು ತಾಂತ್ರಿಕ ಎಂದು ಕರೆಯುತ್ತಾರೆ. ತಾಂತ್ರಿಕ ತನ್ನ ಸಾಧನೆಯ ಹಾದಿಯಲ್ಲಿ ಹಲವಾರು ದೇವತೆಗಳ ಮೊರೆ ಹೋಗಬೇಕಾಗುತ್ತದೆ. ಅಂತಹ ದೇವತೆಗಳನ್ನು ಅಂತರಂಗ ದೇವಿಯರು, ತಟಸ್ಥ ದೇವಿಯರು ಮತ್ತು ಬಹಿರಂಗ ದೇವಿಯರು ಎಂದು ಕರೆಯಲಾಗುತ್ತದೆ. ಸತ್ತವರ ಪುಸ್ತಕಗಳಲ್ಲಿ ಕೆಲವಾರು ಸಾವಿನ ದೇವತೆಗಳ ಉಲ್ಲೇಖ ಅವರ ರೂಪ ವರ್ಣನೆ ಕಂಡುಬರುತ್ತದೆ.
ಟಿಬೆಟಿನ ಸತ್ತವರ ಪುಸ್ತಕ ಹಿಂದೂ ತಾಂತ್ರಿಕ ಉಲ್ಲೇಖಗಳಲ್ಲಿ ಕಂಡುಬರುವ ಮಹತ್ ಶಕ್ತಿಯ ಪ್ರಾಣಕೋಶಗಳಾದ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ಆನಂದಮಯ ಕೋಶಗಳ, ಪ್ರಾಣವಾಯು, ನಾಡಿ, ಚಕ್ರಗಳ ಉಲ್ಲೇಖದ ಜೊತೆಗೆ ಸಾಗುತ್ತದೆ. ಇದೇ ಹಾದಿಯಲ್ಲಿ ನಡೆದುಬಂದ ಬೌದ್ಧ ಧರ್ಮ ಕೆಲ ಕಾಲಾನಂತರ ಹಿಂದೂ ಧರ್ಮದಿಂದ ಬೇರೆಯಾಗಿ ತಂತ್ರ, ಯೋಗಗಳಲ್ಲಿ ತನ್ನದೇ ಆದ ಕೆಲವು ವೈಶಿಷ್ಟéಗಳನ್ನು ಆವಿಷ್ಕರಿಸಿ ಅವನ್ನು ಅಭಿವೃದ್ಧಿಗೊಳಿಸಿಕೊಂಡಿತು. ಬೌದ್ಧ ಧರ್ಮ ಅತೀತ ಆಚರಣೆಗಳಲ್ಲಿ ಮಾನವ ದೇಹದ ನವದ್ವಾರಗಳ ಉಲ್ಲೇಖವನ್ನು ಒಪ್ಪುತ್ತದೆ. (ಹಣೆ, ಹೊಕ್ಕಳು, ನೆತ್ತಿ, ಮೂಗಿನ ಹೊಳ್ಳೆಗಳು, ಕಿವಿಗಳು, ಕಣ್ಣುಗಳು, ಬಾಯಿ, ಮೂತ್ರ ದ್ವಾರ ಮತ್ತು ಗುದದ್ವಾರ). ಇವು ದೇವತೆಗಳು, ಯಕ್ಷರು, ವಿದ್ಯಾಧರರು, ಭೂತ, ಪ್ರಾಣಿಗಳು ಮತ್ತು ನರಕವನ್ನು ಪ್ರತಿನಿಧಿಸುತ್ತವಲ್ಲದೇ ನವಗ್ರಹಗಳ ಸೂಚಕಗಳೂ ಹೌದು. ನವದ್ವಾರಗಳ ಕೇಂದ್ರಗಳಲ್ಲಿ ಅಡಗಿರುವ ಶಕ್ತಿಯನ್ನು ಉದ್ದೀಪಿಸಿ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಧಾನ ಕುಂಡಲಿನಿ ಶಕ್ತಿ.
ಝೆನ್‌ನಂತಹ ಕೆಲವು ಪಂಥಗಳು ಸಾವನ್ನು ನೋಡುವ ಅದನ್ನು ಸ್ವೀಕರಿಸುವ ಬಗೆಯೇ ವಿಚಿತ್ರ. ಒಬ್ಬ ಜೆನ್ ಗುರುವಿದ್ದ. ಆತನ ವಯಸ್ಸು ಸುಮಾರು ನೂರರ ಹತ್ತಿರ. ತನ್ನ ಸಾವಿನ ಸಮಯ ಹತ್ತಿರ ಬಂದಿದೆ ಎಂದು ಆತನಿಗೆ ಅನ್ನಿಸುತ್ತದೆ. ತನ್ನ ಸಾವು ಎಲ್ಲರಿಗಿಂತ ವಿಶೇಷವಾಗಿರಬೇಕು ಎಂದು ತನ್ನ ಶಿಷ್ಯರನ್ನು ಕೇಳುತ್ತಾನೆ- ತಾನು ಹೇಗೆ ಸತ್ತರೆ ಒಳ್ಳೆಯದು ಎಂದು. ಗುರುವಿನ ಮಾತು ಕೇಳಿ ಅವರೆಲ್ಲ ಗಾಬರಿ ಬೀಳುತ್ತಾರೆ. ಕೊನೆಗೆ ಗುರು ಎಲ್ಲರೂ ಮಲಗಿ ಸತ್ತರೆ ತಾನು ತಲೆಕೆಳಗಾಗಿ ನಿಂತು ಸಾಯುವುದಾಗಿ ಘೋಷಿಸಿ ಹಾಗೆಯೇ ತಲೆಕೆಳಗಾಗಿ ನಿಂತುಬಿಡುತ್ತಾನೆ. ಆತನ ಉಸಿರು ನಿಲ್ಲುತ್ತದೆ. ಶಿಷ್ಯರು ತಮ್ಮ ಗುರು ಸತ್ತ ಎಂದು ಎಲ್ಲಾ ಆಶ್ರಮಗಳಿಗೂ ತಿಳಿಸಿ ಅಂತ್ಯಸಂಸ್ಕಾರದ ಸಿದ್ಧತೆ ಮಾಡುತ್ತಾರೆ.
ಈ ಸುದ್ದಿ ಪಕ್ಕದೂರಿನ ಆಶ್ರಮಕ್ಕೆ ತಲುಪುತ್ತದೆ. ಅಲ್ಲಿ ಗುರುವಿನ ಸೋದರಿ ಸನ್ಯಾಸಿನಿಯಾಗಿರುತ್ತಾಳೆ. ಆಕೆ, ಕೈಯಲ್ಲಿ ಕೋಲೊಂದನ್ನು ಹಿಡಿದು ಬೈಯ್ಯುತ್ತ ಬರುತ್ತಾಳೆ. ಬಂದವಳೇ ತಲೆಕೆಳಾಗಿ ನಿಂತು ಸತ್ತಿದ್ದ ಗುರುವಿಗೆ ನಾಲ್ಕು ಬಾರಿಸುತ್ತ “ಇಷ್ಟು ವಯಸ್ಸಾದರೂ ನೀನಿನ್ನೂ ಹುಡುಗಾಟ ಬಿಡಲಿಲ್ಲವಲ್ಲ ! ಸಾಯುವಾಗಲಾದರೂ ಸರಿಯಾಗಿ ಮಲಗಿ ಸಾಯಿ’ ಎನ್ನುತ್ತಾಳೆ.
ದಿಢೀರನೆ ಗುರು ಎಚ್ಚರಗೊಳ್ಳುತ್ತಾನೆ. ಶಿಷ್ಯರಿಗೆಲ್ಲ ತಮ್ಮ ಗುರು ಬದುಕಿದ ಎಂದು ಸಂತೋಷವಾಗುತ್ತದೆ. ಗುರು ತನ್ನ ಅಕ್ಕನಿಗೆ “ನೀನಂದದ್ದು ಸರಿ, ಹಾಗೆಯೇ ಮಾಡುತ್ತೇನೆ’ ಎಂದವನೇ ಹಾಸುಗೆಯಲ್ಲಿ ಮಲಗಿ ಪ್ರಾಣ ಬಿಡುತ್ತಾನೆ. ಗುರುವಿನ ಅಕ್ಕ ಅದನ್ನು ನೋಡಿ ಇದೀಗ ಸರಿಯಾಯ್ತು ಎಂದು ತೆರಳುತ್ತಾಳೆ. ಇದು ಜೆನ್ ಸಿದ್ಧಾಂತ ಸಾವಿಗೆ ನೀಡುವ ಮಹತ್ವ. ಇಂತಹ ತಿರಸ್ಕಾರ ಸಾವಿನ ಮೇಲೆ ಬಂದರೆ ಅದು ಹೇಗಿದ್ದೀತು?
ಮಹಾಯಾನಕ್ಕೆ ಬಾಗಿಲು ಹೆಬ್ಟಾಗಿಲುಗಳಿಲ್ಲಅದನ್ನು ಪ್ರವೇಶಿಸುತ್ತವೆ ಸಾವಿರಾರು ಮಾರ್ಗಗಳು
ಬಾಗಿಲಿಲ್ಲದ ಈ ಹೆಬ್ಟಾಗಿಲ ಮೂಲಕ ನಡೆದುಹೋಗುವಾತ
ಸ್ವರ್ಗ-ಮರ್ತ್ಯಗಳ ನಡುವೆ ಓಡಾಡುವವನು ಮುಕ್ತ (ಝೆನ್ ಕಥೆಗಳು: ಶ್ರೀ ಜಿ.ಎನ್. ರಂಗನಾಥರಾವ್)
ಈ ಬಾಗಿಲ ಮೂಲಕ ಒಳ ಹೊಕ್ಕವ ಮತ್ತೆಲ್ಲಿಂದ ಹಿಂತಿರುಗುತ್ತಾನೋ? ಎಣಿಯಿರದ, ಕೊನೆಯಿರದ ಈ ಪ್ರಯಾಣದ ಹೆಜ್ಜೆ ಗುರುತುಗಳನ್ನು ಹುಡುಕುವ ಪ್ರಯತ್ನ ಇದು. ಡಿ. ಎಸ್. ಲಿಂಗರಾಜು