Advertisement
ಕೆಲವೊಮ್ಮ ಮನೆಗಳಲ್ಲಿ ಹೆಚ್ಚು ಕಾಣದಿದ್ದರೂ ನಮಗೆ ಹೆಚ್ಚು ಉಪಯುಕ್ತವೂ, ಒಳಾಂಗಣಕ್ಕೆ ಹೆಚ್ಚು ಮೆರಗನ್ನು ನೀಡುವುದು ನೆಲಹಾಸುಗಳು. ಅಂಗಡಿಗಳಿಗೆ ಹೋದರೆ ಯಾವುದನ್ನು ಖರೀದಿಸಬೇಕು ಎನ್ನುವುದೇ ಕಷ್ಟಕರ ಆಯ್ಕೆ ಆಗುತ್ತದೆ. ಜೊತೆಗೆ ನಮ್ಮ ಬಳಕೆ, ಹೆಚ್ಚು ಸವೆಯುವ ಸಾಧ್ಯತೆಯಿರುವ ಕಡೆಗೆ ಗಟ್ಟಿಮುಟ್ಟಾದ, ಸುಲಭದಲ್ಲಿ ಮುರಿಯದ ಬಿಲ್ಲೆಕಲ್ಲುಗಳನ್ನು ಆಯ್ದು ಕೊಳ್ಳಬೇಕಾಗುತ್ತದೆ. ಹಾಗೆಯೇ ವಿನ್ಯಾಸ ಎದ್ದು ಕಾಣುವಂತಿರಬೇಕು, ಒಳಾಂಗಣಕ್ಕೆ ಸೂಕ್ತವಾಗಿರುವ ಟೈಲ್ಸ್‌ಗಳನ್ನು, ಮುಖ್ಯವಾಗಿ ಡ್ರಾಯಿಂಗ್ ರೂಮ್, ಬೆಡ್ ರೂಮ್ ಇತ್ಯಾದಿ ಜಾಗದಲ್ಲಿ ಬಳಸಬೇಕಾಗುತ್ತದೆ. ನೀರು ಬೀಳುವ ಜಾಗಗಳಲ್ಲಿ ಈ ಸ್ಥಳಕ್ಕೆಂದೇ ವಿಶೇಷವಾಗಿ ತಯಾರಾಗಿರುವ ಟೈಲ್ಸ್‌ಗಳನ್ನು ಬಳಸಬೇಕು. ಇತ್ತೀಚೆಗೆ ಕ್ರಿಮಿಕೀಟ ನಿರೋಧಕ ಗುಣಗಳನ್ನು ಹೊಂದಿರುವ ಟೈಲ್ಸ್‌ಗಳನ್ನೂ ಕೂಡ ತಯಾರು ಮಾಡಿದ್ದಾರೆ. ಈ ಮಾದರಿಯ ಬಿಲ್ಲೆಕಲ್ಲುಗಳಲ್ಲಿ ಪಾಚಿ ಕಟ್ಟುವುದು, ಕರೆ ಕಟ್ಟುವುದು ಆಗುವುದಿಲ್ಲ. ಹಾಗಾಗಿ ಜಾರುವ ಸಾಧ್ಯತೆ ಕಡಿಮೆ ಇರುತ್ತದೆ. ಗೋಡೆ ಸೂರಿಗೆ ಹೋಲಿಸಿದರೆ ಮನೆಗಳಲ್ಲಿ ಪಾದ ತಾಗಿ ಅತಿ ಹೆಚ್ಚು ಸವಕಳಿಗೆ ಒಳಗಾಗುವ ಸ್ಥಳ ಮನೆಯ ನೆಲಹಾಸೇ ಆಗಿರುವ ಕಾರಣ, ಅವುಗಳ ಆಯ್ಕೆ ಹಾಗೂ ವಿನ್ಯಾಸದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅನಿವಾರ್ಯ.
ಇತ್ತೀಚೆಗೆ ಬರುತ್ತಿರುವ ಟೈಲ್ಸ್‌ಗಳು ಅತಿ ಹೆಚ್ಚು ಎನ್ನುವಷ್ಟು ಪಾಲಿಶ್ ಹೊಂದಿದ್ದು, ಅವುಗಳ ನುಣುಪು ಕಾಲು ಜಾರಲು ಹೇಳಿ ಮಾಡಿಸಿದಂತಿದೆ. ಅದರಲ್ಲೂ ಒಂದೆರೆಡು ನೀರಹನಿ ಬಿದ್ದರೂ ಸ್ಕಿಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ದೊಡ್ಡ ದೊಡ್ಡ ಗಾತ್ರದ ಟೈಲ್ಸ್‌ಗಳ ಮಧ್ಯೆ ಅಂದರೆ, ಎರಡು ಅಡಿಗೆ ಎರಡು ಅಡಿ ಅಗಲದ ನಂತರ ಒಂದು ಇಲ್ಲವೇ ಎರಡು ಇಂಚು ಅಗಲದ ಕಾಂಟ್ರಾಸ್ಟ್ ಪಟ್ಟಿಗಳನ್ನು ಅಳವಡಿಸಿದರೆ, ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಜಾರುವ ಸಾಧ್ಯತೆಯೂ ಕಡಿಮೆ ಆಗುತ್ತದೆ. ಟೈಲ್ಸ್‌ಗಳ ಅಗಲ ಮತ್ತೂ ಹೆಚ್ಚಿದ್ದರೆ, ಅಂದರೆ ನಾಲ್ಕು ಅಡಿಗೆ ಎರಡು ಅಡಿ ಇದ್ದರೆ, ನಾವು ಓಡಾಡುವ ಸ್ಥಳಕ್ಕೆ ಅಡ್ಡಡ್ಡವಾಗಿ ಹಾಕಿದರೆ, ನಮ್ಮ ಹೆಜ್ಜೆ ಸುಮಾರು ಎರಡು ಅಡಿಗಳಷ್ಟು ಇರುವುದರಿಂದ, ಪ್ರತಿ ಹೆಜ್ಜೆಗೂ ಒಂದೊಂದು ಪಟ್ಟಿ ಸಿಕ್ಕಿದಂತಾಗಿ, ಜಾರುವ ಸಾಧ್ಯತೆ ಕಡಿಮೆ ಆಗುತ್ತದೆ. ಟೈಲ್ಸ್ ಅಳತೆ ಹಾಗೂ ಅವುಗಳ ಸೂಕ್ತತೆ
ಸಣ್ಣ ಅಳತೆಯ ಟೈಲ್ಸ್‌ಗಳಲ್ಲಿ ಹೆಚ್ಚು ಜಾಯಿಂಟ್ಸ್ ಬರುತ್ತದೆ ಹಾಗೂ ಅವುಗಳ ಬಳಕೆಯಿಂದ ಜಾರುವ ಸಾಧ್ಯತೆ ಕಡಿಮೆ ಆಗುತ್ತದೆ. ಆದರೆ ದೊಡ್ಡ ಹಾಲ್ – ಲಿವಿಂಗ್ ರೂಮಿಗೆ ಇತ್ತೀಚಿನ ಟ್ರೆಂಡ್‌ನ ಪ್ರಕಾರ ಆದಷ್ಟೂ ದೊಡ್ಡ ಟೈಲ್ಸ್, ನಾಲ್ಕು ಅಡಿಗೆ ಎರಡು ಅಡಿ, ಇಲ್ಲವೇ ಮೂರು ಅಡಿಗೆ ಮೂರು ಅಡಿ ಟೈಲ್ಸ್ ಅನ್ನು ಹಾಕುವುದೂ ಜನಪ್ರಿಯವಾಗಿದೆ. ಹೀಗೆ ದೊಡ್ಡ ಗಾತ್ರದ ಟೈಲ್ಸ್ ಬಳಸಲು ಮನಸ್ಸಾಗಿದ್ದರೆ, ಈ ಸ್ಥಳದಲ್ಲಿನ ಪೀಠೊಪಕರಣಗಳನ್ನು ಪರಿಗಣಿಸಿ, ಎಲ್ಲಿ ನಾವು ಹೆಚ್ಚು ಓಡಾಡುತ್ತೇವೋ ಅಲ್ಲಿ ಅಂದರೆ ಸಾಮಾನ್ಯವಾಗಿ ಕೋಣೆಯ ಒಂದು ಗೋಡೆಯ ಪಕ್ಕ, ಇದಕ್ಕೆಂದು ಮೀಸಲಿದ್ದು, ಫರ್ನಿಚರ್ ಇತರೆ ಮೂರು ಕಡೆ ಇದ್ದರೆ, ಬಾರ್ಡರ್ ಕಟ್ಟಲು ಸೂಕ್ತವಾಗಿರುತ್ತದೆ. ನಾವು ನಡೆದಾಡಲು ಸುಮಾರು ಎರಡು ಅಡಿ ಅಗಲ ಸಾಕಾಗುತ್ತದೆ. ಆದುದರಿಂದ, ಕೋಣೆಯ ಸುತ್ತಲೂ ಎರಡು ಅಡಿ ಅಂತರದಲ್ಲಿ ಬಾರ್ಡರ್ ವಿನ್ಯಾಸ ಮಾಡಿದರೆ, ದೊಡ್ಡ ಹಾಲ್ -ಲಿವಿಂಗ್ ರೂಮಿನ ಮಧ್ಯೆ ದೊಡ್ಡ ಟೈಲ್ಸ್‌ಗಳು ಗೋಚರವಾದರೂ, ನಾವು ಓಡಾಡುವ ಸ್ಥಳದಲ್ಲಿ ಹೆಚ್ಚು ಕಾಲು ಜಾರದ ವಿನ್ಯಾಸ ಮೂಡಿಬಂದಿರುತ್ತದೆ.
Related Articles
ಕೆಲವೊಮ್ಮೆ ಅನಿವಾರ್ಯವಾಗಿ ಕೋಣೆಯ ಮಧ್ಯ ಭಾಗದಲ್ಲೇ ಓಡಾಡುವ ಹಾಗೆ ಬರುತ್ತದೆ. ನಾವು ಇದನ್ನು ಮೊದಲೇ ಗಮನಿಸಿ, ಕೋಣೆಯ ಮಧ್ಯೆಯೂ ವಿಶೇಷ ವಿನ್ಯಾಸಗಳನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಒಂದೇ ರೀತಿಯಲ್ಲಿ- ಏಕತಾನತೆಯೇ ಫ್ಯಾಷನ್ ಎನ್ನುವಂತಾಗಿದ್ದರೂ ಕೆಲ ವಿನ್ಯಾಸಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಆದುದರಿಂದ, ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಹಾಲ್ -ಲಿವಿಂಗ್ ರೂಂ ಮಧ್ಯೆಯೂ ವಿವಿಧ ಚಿತ್ತಾರಗಳನ್ನು ಮೂಡಿಸಿಕೊಂಡರೆ, ಅವು ನೋಡಲು ಅತ್ಯಾಕರ್ಷಕ ಆಗಿರುವದರ ಜೊತೆಗೆ ನಾವು ನುಣ್ಣನೆಯ ದೊಡ್ಡ ಗಾತ್ರದ ಟೈಲ್ಸ್‌ಗಳ ಮೇಲೆ ಜಾರುವ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.
ಅಡುಗೆ ಮನೆ ಹಾಗೂ ಟಾಯ್ಲೆಟ್‌ಗಳಲ್ಲಿ ಹೆಚ್ಚು ಜಾರಲು ಮುಖ್ಯ ಕಾರಣ ನೀರೇ. ಆದರೂ ಕೆಲವೊಮ್ಮೆ ಇಳಿಜಾರೂ ಕೂಡ ಕಾರಣವಾಗಿರುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ನೀಡಿರುವ ಇಳಿಜಾರು ಸ್ವಲ್ಪ ಹೆಚ್ಚಾದರೂ ಹೆಚ್ಚು ಹೆಚ್ಚು ಜಾರುವ ಸಾಧ್ಯತೆ ಇರುತ್ತದೆ. ಆದುದರಿಂದ ಈ ಪ್ರದೇಶದಲ್ಲಿ ಸೂಕ್ತ ಬಾರ್ಡರ್ ಹಾಗೂ ಪಟ್ಟಿಗಳನ್ನು ನೀಡಿದರೆ, ಇವು ಬ್ರೇಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಿ, ಜಾರುವುದನ್ನು ತಪ್ಪಿಸುತ್ತವೆ.
Advertisement
ವಿನ್ಯಾಸ ಮಾಡಲು ಉಳಿಕೆ ಟೈಲ್ಸ್ನಾವು ಎಷ್ಟೇ ಲೆಕ್ಕಾಚಾರ ಮಾಡಿ ಟೈಲ್ಸ್ ಖರೀದಿಸಿದರೂ, ಒಂದಷ್ಟು ಟೈಲ್ಸ್ ಉಳಿದೇ ಉಳಿಯುತ್ತದೆ. ಹೀಗಾಗಲು ಕಾರಣ- ನಮ್ಮ ಮನೆಯ ಕೋಣೆಯ ಅಳತೆಗೂ ಅಂಗಡಿಯಲ್ಲಿ ಸಿಗುವ ಟೈಲ್ಸ್ ಗಳ ಅಳತೆಗೂ ತಾಳೆ ಆಗದಿರುವುದೇ ಆಗಿರುತ್ತದೆ. ಆದುದರಿಂದ ಹೀಗೆ ಉಳಿಕೆ ಆಗುವ ಟೈಲ್ಸ್‌ನ ಸಣ್ಣ ಗಾತ್ರದ ತುಂಡುಗಳನ್ನೂ ಕೂಡ ನಾವು ನಮ್ಮ ಮನೆಗಳಲ್ಲಿ ಕಾಲುಜಾರುವುದನ್ನು ತಪ್ಪಿಸುವ ಸುರಕ್ಷತಾ ಕ್ರಮಕ್ಕೆ ಬಳಸಬಹುದು. ಕೆಲವೊಮ್ಮೆ ಇಡೀ ಕೋಣೆ ಒಂದೇ ರೀತಿಯಲ್ಲಿ ಇದ್ದರೆ ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ. ಕೆಲ ಸ್ಥಳಗಳಲ್ಲಿ ಬಾರ್ಡರ್ ಇಲ್ಲವೇ ಇತರೆ ವಿನ್ಯಾಸಕ್ಕೆ ಮೊರೆ ಹೋಗಬೇಕಾಗುತ್ತದೆ. ಹಾಗೆಯೇ, ಟೈಲ್ಸ್‌ಗಳ ಮಧ್ಯೆ ಪಟ್ಟಿಗಳ ರೂಪದಲ್ಲಿ ಇಲ್ಲವೇ ಒಂದು ಬಿಟ್ಟು ಮತ್ತೂಂದು ರೀತಿಯಲ್ಲಿ ಅರೆಂಜ್ ಮಾಡಬಹುದು. ಕೆಲ ಸ್ಥಳಗಳಲ್ಲಿ ಕಾಂಟ್ರಾಸ್ಟ್ ಇದ್ದರೆ, ಅದು ಇರುವ ಸ್ಥಳವನ್ನು ಹಿಗ್ಗಿಸುತ್ತದೆ. ನೆಲಹಾಸು ಕಣ್ಣಿಗೆ ಹೆಚ್ಚು ಗೋಚರವಾಗುವುದರ ಜೊತೆಗೆ ಹೆಜ್ಜೆಯ ಅಳತೆ- ಕ್ರಯಿಸುವ ದೂರ ನುಣ್ಣನೆಯ ಹಾಗೂ ಒಂದೇ ರೀತಿಯಲ್ಲಿರುವ ಟೈಲ್ಸ್‌ಗಳಲ್ಲಿ ಸುಲಭದಲ್ಲಿ ನಮ್ಮ ಅನುಭವಕ್ಕೆ ಬರುವುದಿಲ್ಲ. ಇದರಿಂದಾಗಿ ಹೆಜ್ಜೆ ತಪ್ಪುವುದರ ಜೊತೆಗೆ ಜಾರುವ ಸಾಧ್ಯತೆಯೂ ಇರುತ್ತದೆ. ಆದರೆ ಪ್ರತಿ ಟೈಲ್ಸ್ ಎದ್ದು ಕಾಣುವಂತಿದ್ದರೆ, ಕ್ರಯಿಸುವ ದೂರ ಸುಲಭದಲ್ಲಿ ಗೋಚರವಾಗಿ, ಹೆಜ್ಜೆ ದೃಢವಾಗಲು ಅನುಕೂಲ ಆಗುತ್ತದೆ. ಫ್ಯಾಷನ್ ಗೋಸ್ಕರ ನಾವು ನಮ್ಮ ಮನೆಯಲ್ಲಿ ತೀರ ಸುರಕ್ಷಿತವಾಗಿ ಓಡಾಡುವುದನ್ನು ತಪ್ಪಿಸುವ ಅಗತ್ಯವಿಲ್ಲ. ನಮ್ಮ ಕಾಲಿಗೆ ಸದೃಢ ಆಧಾರ ಕಲ್ಪಿಸಲು ಉಳಿಕೆ ಟೈಲ್ಸ್‌ಗಳಿಂದಲೂ ವೈವಿಧ್ಯಮಯ ವಿನ್ಯಾಸಗಳನ್ನು ಮಾಡಿಕೊಳ್ಳಬಹುದು! ಮಾಹಿತಿ: 98441 32826 – ಆರ್ಕಿಟೆಕ್ಟ್ ಕೆ.ಜಯರಾಮ್