Advertisement

ಆಲಿಂಗನದ ಪರದೆಯಲ್ಲಿ ಆತ್ಮೀಯರ ಬೆಸುಗೆ

03:02 AM Jul 05, 2020 | Sriram |

ಬ್ರುಸೆಲ್ಸ್‌: ಕೋವಿಡ್‌ ಎಂಬ ಯಕಶ್ಚಿತ್‌ ವೈರಸ್‌ ಇಡೀ ಮನುಕುಲವನ್ನು ಬೆಚ್ಚಿಬೀಳಿಸಿರುವ ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಜನರು ಆತ್ಮೀಯ ಸ್ಪರ್ಶಕ್ಕೆ ಹಾತೊರೆಯುವಂತಾಗಿದೆ. ಪ್ರೀತಿಪಾತ್ರರನ್ನು ಕಂಡೊಡನೆ ಓಡಿ ಬಂದು ಆಲಿಂಗಿಸುತ್ತಿದ್ದ, ಬೆಚ್ಚನೆಯ ಅಪ್ಪುಗೆಯ ಸುಖದಲ್ಲಿ ಎಲ್ಲ ನೋವನ್ನು ಮರೆಯುತ್ತಿದ್ದ, ಚುಂಬಿಸಿ, ಕೈಕುಲುಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದ ಜನರೀಗ ಆರಡಿ ದೂರ ನಿಂತು ಮಾತನಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

Advertisement

ಶಾರೀರಿಕ ಅಂತರ ಕಾಪಾಡಿಕೊಳ್ಳುವಿಕೆ ಅಗತ್ಯವಾಗಿರುವ ಕಾರಣ ಕೋವಿಡ್‌ ಸೋಂಕುಪೀಡಿತರಂತೂ ತಮ್ಮ ಮನೆಯವರನ್ನು ನೋಡಲಾಗದೆ, ಮುಖಾಮುಖೀ ನಿಂತು ಭಾವನೆಗಳನ್ನು ಹಂಚಿಕೊಳ್ಳಲಾಗದೆ ತೀರಾ ಸಂಕಟ ಅನುಭವಿಸುತ್ತಿದ್ದಾರೆ. ದೂರವಾಣಿಯಲ್ಲಿ ಮಾತನಾಡಿದರೂ ಪರಸ್ಪರ ಸ್ಪರ್ಶಿಸಲಾಗದ ನೋವು ಅವರನ್ನು ಕಾಡುತ್ತಲೇ ಇರುತ್ತದೆ. ಇಂಥವರ ವೇದನೆಗೆ ಕ್ರಿಯಾಶೀಲ ಚಿಂತನೆಯೊಂದಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಅದರ ಭಾಗವೆಂಬಂತೆ ಜಗತ್ತಿನ ಹಲವೆಡೆ ತಬ್ಬಿಕೊಳ್ಳುವ ಕೈಗವುಸು, ಅಪ್ಪುಗೆಯ ಸುರಂಗ, ಆಲಿಂಗನದ ಪರದೆಗಳ ಮೂಲಕ ಆತ್ಮೀಯರನ್ನು ಒಂದುಗೂಡಿಸುವ ಕೆಲಸ ನಡೆದಿದೆ. ಬೆಲ್ಜಿಯಂನ ಜಾರ್ಡಿನ್ಸ್‌ ಡೆ ಪಿಕಾರ್ಡಿ ನರ್ಸಿಂಗ್‌ ಹೋಂನಲ್ಲಿ ಆಲಿಂಗನದ ಕರ್ಟನ್‌ ಪರಿಚಯಿಸಲಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ 11 ವಾರಗಳ ಕಾಲ ಕುಟುಂಬ ಸದಸ್ಯರನ್ನು ಕಾಣದೆ ನೊಂದಿದ್ದ ಅನೇಕ ಜೀವಗಳಿಗೆ ಈ ಪರದೆ ಆಶಾಕಿರಣವಾಗಿದೆ. ಪರದೆಯ ಎರಡೂ ಕಡೆಗಳಲ್ಲಿ ನಿಂತು ಪರಸ್ಪರರನ್ನು ತಬ್ಬಿಕೊಂಡು ಸಂತೈಸಲು ಅವಕಾಶ ಕಲ್ಪಿಸಲಾಗಿದೆ.

ಹೇಗಿದೆ ಈ ಹಗ್‌ ಕರ್ಟನ್‌?
ದೊಡ್ಡ ಪ್ಲಾಸ್ಟಿಕ್‌ ಶೀಟನ್ನು ಪರದೆಯಂತೆ ಅಳ ವಡಿಸಿ, ಮಧ್ಯಭಾಗದಲ್ಲಿ ಎರಡೂ ಕಡೆ ಎರಡು ಪಾಕೆಟ್‌ಗಳನ್ನು ಮಾಡಲಾಗಿದೆ. ಪರದೆಯ ಒಂದು ಭಾಗ ದಲ್ಲಿ ಸೋಂಕುಪೀಡಿತರು ಮತ್ತು ಮತ್ತೊಂದು ಭಾಗದಲ್ಲಿ ಅವರ ಆತ್ಮೀಯರು ನಿಲ್ಲುತ್ತಾರೆ. ಪಾಕೆಟ್‌ಗಳೊಳಗೆ ಕೈಗಳನ್ನು ತೂರಿಸಿ, ಆಲಿಂಗಿಸಿಕೊಂಡು, ಸಾಂತ್ವನ ಹೇಳುತ್ತಾರೆ. ಪ್ರತೀ ಬಾರಿಯ ಬಳಕೆಯ ಅನಂತರ ದಾದಿಯರು ಪ್ಲಾಸ್ಟಿಕ್‌ ಕರ್ಟನನ್ನು ಜಾಗರೂಕತೆಯಿಂದ ಸ್ವತ್ಛಗೊಳಿಸಿ, ಸೋಂಕು ನಿವಾರಿಸುತ್ತಾರೆ.

ಪ್ರೀತಿಯ ಅಭಿವ್ಯಕ್ತಿಗೆ ಹಲವು ಮಾರ್ಗಗಳು
-ಹಗ್‌ ಕರ್ಟನ್‌ ಅಥವಾ ಕಡಲ್‌ ಕರ್ಟನ್‌ ಬಳಕೆ ಇದೇ ಮೊದಲಲ್ಲ. ಇತ್ತೀಚೆಗೆ ದಕ್ಷಿಣ ಬ್ರೆಜಿಲ್‌ನ ಪ್ರಾಂತ್ಯವೊಂದರ ವೃದ್ಧಾಶ್ರಮದಲ್ಲಿ “ಆಲಿಂಗನದ ಸುರಂಗ’ (ಹಗ್‌ ಟನೆಲ್‌)ವನ್ನು ನಿರ್ಮಿಸಲಾಗಿತ್ತು. ಇಲ್ಲೂ ಪರಸ್ಪರ ಪ್ರೀತಿಪಾತ್ರರು ಸೋಂಕು ಅಂಟಿಸಿಕೊಳ್ಳುವ ಭೀತಿಯಿಲ್ಲದೆ ಒಬ್ಬರನ್ನೊಬ್ಬರು ಆಲಿಂಗಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
-ಮೇ ತಿಂಗಳಲ್ಲಿ ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಪ್ರೀತಿಯ ಅಜ್ಜಿಯನ್ನು ತಬ್ಬಿಕೊಳ್ಳುವ ಉದ್ದೇಶದಿಂದ ಸ್ವತಃ ಇಂಥ ಅಪ್ಪುಗೆಯ ಕರ್ಟನ್‌ ತಯಾರಿಸಿದ್ದರು. ಆ್ಯಂಟನಿ ಕೇವಿನ್‌ ಎಂಬ ಆ ವ್ಯಕ್ತಿ ತನ್ನ ಅಜ್ಜಿಯನ್ನು ತಬ್ಬಿಕೊಂಡು ಕಣ್ಣೀರಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.
– ಕೆನಡಾದ ಕೆರೋಲಿನ್‌ ಎಲ್ಲಿಸ್‌ ಎಂಬವರು ಅಮ್ಮಂದಿರ ದಿನದಂದು ತನ್ನ ತಾಯಿಗೆ “ಹಗ್‌ ಗ್ಲೌಸ್‌’ (ಆಲಿಂಗನದ ಕೈಗವುಸು) ಉಡುಗೊರೆಯಾಗಿ ನೀಡಿದ್ದು ಕೂಡ ಸುದ್ದಿಯಾಗಿತ್ತು.
-ಬ್ರಿಟನ್‌ನಲ್ಲಿ ಆರೋಗ್ಯಸೇವಾ ಕಾರ್ಯಕರ್ತೆಯೊಬ್ಬರು ಅಸ್ತಮಾದಿಂದ ಬಳಲುತ್ತಿರುವ ಮಗಳನ್ನು ಆಲಿಂಗಿಸಲೆಂದೇ ಕಡಲ್‌ ಕರ್ಟನ್‌ ತಯಾರಿಸಿ, ಲಾಕ್‌ಡೌನ್‌ ಅವಧಿಯಲ್ಲಿ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಮಗಳನ್ನು 9 ವಾರಗಳ ಬಳಿಕ ಸ್ಪರ್ಶಿಸಿ ಭಾವುಕರಾಗಿದ್ದರು.
-ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿಗಳಿಗೆ “ಹಗ್‌ ಸ್ಟೇಷನ್‌’ ನಿರ್ಮಿಸಿ ಸಂತುಷ್ಟಿಗೊಳಿಸಿದ್ದರು.ಅನಂತರ ಬ್ರೆಜಿಲ್‌, ಸ್ಪೇನ್‌ ಸೇರಿದಂತೆ ಬಹುತೇಕ ದೇಶಗಳಲ್ಲಿ ಇಂಥ ಐಡಿಯಾಗಳು ಮನೆ ಮಾತಾದವು. ಪ್ರೀತಿ-ಭಾವನೆಗಳನ್ನು ವ್ಯಕ್ತಪಡಿಸುವ ಹೊಸ ಮಾಧ್ಯಮಗಳಾದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next