Advertisement

ಗುರು ಭವನ ನಿರ್ಮಾಣಕ್ಕೆ ಗ್ರಹಣ!

06:37 PM Nov 15, 2020 | Suhan S |

ಕೂಡ್ಲಿಗಿ: ಗುರು ಭವನ ನಿರ್ಮಾಣಕ್ಕೆ 2008-09ನೇ ಸಾಲಿನಲ್ಲಿ ಭೂಮಿಪೂಜೆ ನೆರವೇರಿಸಿ ಬುನಾದಿ ಹಾಕಿ 11 ವರ್ಷ ಕಳೆದಿದೆ. ಅಂದಿನಿಂದ ಇಂದಿನವರೆಗೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ!

Advertisement

ಪಟ್ಟಣದ ಚೋರನೂರು ರಸ್ತೆಯಲ್ಲಿನಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ 60-40 ಅಡಿ ಅಳತೆಯ ನಿವೇಶನಗುರುತು ಮಾಡಲಾಗಿತ್ತು. ಇದರಲ್ಲಿ 1.25ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಅಂದಿನ ಶಾಸಕರಾಗಿದ್ದ ಬಿ. ನಾಗೇಂದ್ರ ಭೂಮಿಪೂಜೆ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ 20 ಲಕ್ಷ ರೂ. ಹಣ ಬಿಡುಗಡೆಯಾಗಿದ್ದು, ಕಾಮಗಾರಿಯೂ ಆರಂಭವಾಗಿತ್ತು. ಆದರೆ ನೆಲಮಾಳಿಗೆ ನಿರ್ಮಾಣ ಮಾಡಲು ಸುಮಾರು 10 ಅಡಿಯಷ್ಟು ನೆಲ ಅಗೆದು ಪಿಲ್ಲರ್‌ಗಳನ್ನು ಹಾಕಿ ಕೈಬಿಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಂಡಿದ್ದು ಮಳೆ ಬಂದಾಗ ನೀರು ನಿಂತು ಕೃಷಿ ಹೊಂಡದಂತೆ ಗೋಚರವಾಗುತ್ತಿದೆ.

9 ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ 5 ಜನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಬದಲಾದರೂ ಗುರುಭವನ ನಿರ್ಮಾಣದ ಬಗ್ಗೆ ಯಾರೊಬ್ಬರು ಅಸಕ್ತಿ ವಹಿಸಿಲ್ಲ. ಇದರಿಂದ ಶಿಕ್ಷಕರು ನೀಡಿದ ವಂತಿಗೆ ಹಣದ ಖರ್ಚುವೆಚ್ಚದ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐದು ಲಕ್ಷ ಹಣ ಅನುದಾನವನ್ನು ಡಿಸಿ ಕಚೇರಿಗೆ ವಿಧಾನಪರಿಷತ್‌ನಿಂದ ಬಿಡುಗಡೆ ಮಾಡಿದರೂ ಸದ್ಬಳಕೆಯಾಗಿಲ್ಲ. ಅಧಿಕಾರಿಗಳು ಹಾಗೂ ಶಿಕ್ಷಕರು ಸೇರಿ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂದು ಮಾತ್ರ ಗುರುಭವನದ ನಿರ್ಮಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಕಾಮಗಾರಿ ಜಾರಿಯಾಗಿಲ್ಲ ಎಂದು ಬಹುತೇಕ ಶಿಕ್ಷಕರು ಅಭಿಪ್ರಾಯ ಪಡುತ್ತಾರೆ.

ಇನ್ನಾದರೂ ಶಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅನೇಕ ಶಿಕ್ಷಕರು ಒತ್ತಾಯಿಸಿದ್ದಾರೆ. ಈಗಾಗಲೇ ಶಿಕ್ಷಕರ ಕಲ್ಯಾಣ ನಿಧಿಯಿಂದ 19 ಲಕ್ಷ ರೂ. ಬಿಡುಗೊಳಿಸಿ ವಾಪಸ್ಸು ತೆಗೆದುಕೊಂಡರು. 2018ರಲ್ಲಿ ಮತ್ತೇ ಚೇತರಿಕೆಯಿಂದ ಶಿಕ್ಷಕರ ಕಲ್ಯಾಣ ನಿಧಿಯಿಂದ ಹಂತಹಂತವಾಗಿ 19 ಲಕ್ಷ ರೂವನ್ನು ಕೊಡುತ್ತೇವೆ ಎಂದು ಮುಂದಾಗಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಬಿ. ಶಿವಾನಂದ ಬೇಸರ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಶಾಸಕರಾದ ಎನ್‌.ವೈ. ಗೋಪಾಲಕೃಷ್ಣ ಮತ್ತು ಲೋಕಸಭಾ ಸದಸ್ಯರಾದ ದೇವೆಂದ್ರಪ್ಪ ಅನುದಾನ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದಲ್ಲೇ ಶಿಕ್ಷಕರ ಭವನ ಉದ್ಘಾಟನೆ ಮಾಡಿ ಶಿಕ್ಷಕರ ದಿನಾಚರಣೆ ಆಚರಿಸೋಣ ಎಂದು ತಿಳಿಸಿದ್ದಾರೆ. ಕೊಟ್ರಗೌಡ್ರು,ಕೂಡ್ಲಿಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ

Advertisement

ಶಿಕ್ಷಕ ಭವನ ನಿರ್ಮಾಣದ ಅನುಮತಿ ನವೀಕರಿಸಬೇಕಾಗಿದ್ದು, ಈ ಹಿಂದಿನ ಸರ್ಕಾರಿ ನೌಕರರ ಸಂಘದಅಧ್ಯಕ್ಷರಾಗಿದ್ದ ಪಿ.ವಿ. ಕೊತ್ಲಪ್ಪ ಅವರಿಗೆ ಅನುಮತಿ ನವೀಕರಿಸುವಂತೆ ಪತ್ರ ನೀಡಲಾಗಿತ್ತು. ಅನುಮತಿ ನವೀಕರಿಸದ ಹಿನ್ನೆಲೆಯಲ್ಲಿ ಯಾವ ಅನುದಾನವೂ ಬಿಡುಗಡೆಯಾಗುತ್ತಿಲ್ಲ. ಬಿ. ಉಮಾದೇವಿ,ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ್ಲಿಗಿ

 

ಕೆ.ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next