Advertisement

ಹೆದ್ದಾರಿ ಬದಿ ಅಪಾಯ ಆಹ್ವಾನಿಸುವ ಮರಣ ಬಾವಿ !

03:35 AM Jun 27, 2018 | Karthik A |

ಮಹಾನಗರ : ಕುಂಟಿಕಾನ ಫ್ಲೈಓವರ್‌ ನಿಂದ ಲೋಹಿತ್‌ ನಗರಕ್ಕೆ ಸಂಪರ್ಕ ಕಲ್ಪಿಸುವ ಕಾರು ಶೋರೂಂ ಎದುರಿನ ಸರ್ವಿಸ್‌ ರಸ್ತೆ ಮಧ್ಯೆ ದೊಡ್ಡ ಗುಂಡಿಯಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ರಸ್ತೆ ಮಧ್ಯ ಇರುವಂತಹ ಮ್ಯಾನ್‌ ಹೋಲ್‌ ಸುತ್ತಲೂ ನಿರ್ಮಾಣವಾದ ಗುಂಡಿಯಿಂದಾಗಿ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಒಂದು ವರ್ಷಗಳ ಹಿಂದೆ ಮ್ಯಾನ್‌ ಹೋಲ್‌ ನಿರ್ಮಾಣಕ್ಕೆ ಇದೇ ರಸ್ತೆಯನ್ನು ಅಗೆಯಲಾಗಿತ್ತು. ಕೆಲವು ತಿಂಗಳ ಹಿಂದೆ ಹೊಸತಾಗಿ ಡಾಮರು ಹಾಕಲಾಗಿತ್ತು. ಕಳೆದ ತಿಂಗಳು ಬಂದಂತಹ ಜೋರಾದ ಮಳೆಗೆ ರಸ್ತೆ ಮಧ್ಯೆ ಇರುವ ಮ್ಯಾನ್‌ ಹೋಲ್‌ ಸುತ್ತ ಬಿರುಕು ಬಿದ್ದಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆಪೆ ಡಾಮರು ಕಾಮಗಾರಿಯೇ ಮೂಲ ಕಾರಣ. ಆದರೆ ಸ್ಥಳೀಯಾಡಳಿತ ಮಾತ್ರ ಕೈಕಟ್ಟಿ ಕೂತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಬ್ಯಾರಿಕೇಡ್‌ ಅಳವಡಿಸಿಲ್ಲ
ರಸ್ತೆ ಮಧ್ಯೆ ಇರುವ ದೊಡ್ಡ ಹೊಂಡದಿಂದ ಅಪಾಯ ಸ್ಥಿತಿಯಲ್ಲಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಈ ಹೊಂಡದ ನಾಲ್ಕು ಬದಿಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿಲ್ಲ. ಇದೇ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಎಚ್ಚರ ತಪ್ಪಿದರೆ ವಾಹನ ಸವಾರರು ಈ ಗುಂಡಿಗೆ ಬೀಳುವ ಅಪಾಯ ಸ್ಥಳದಲ್ಲಿದೆ. ಇದೇ ರಸ್ತೆಯ ಪಕ್ಕದಲ್ಲಿ ಮತ್ತೂಂದು ಕಡೆಯಲ್ಲಿ ಯೂ ರಸ್ತೆ ಇದೇ ರೀತಿ ಬಿರುಕು ಬಿಟ್ಟಿದೆ.

ಅಸಮರ್ಪಕ ಚರಂಡಿ ವ್ಯವಸ್ಥೆ


ಈ ರಸ್ತೆಯ ಬದಿಯಲ್ಲಿರುವ ಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಚರಂಡಿ ತುಂಬೆಲ್ಲಾ ಕಸ, ಹುಲ್ಲು, ಕಲ್ಲುಗಳು ತುಂಬಿಕೊಂಡಿದೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯ ವಾಗುತ್ತಿಲ್ಲ. ರಸ್ತೆಗೆ ನೀರು ಬಂದು ಕೃತಕ ನೆರೆ ಉಂಟಾಗುತ್ತಿದೆ. ಒಂದು ವೇಳೆ ರಸ್ತೆ ತುಂಬಾ ನೀರು ತುಂಬಿದರೆ ಈ ಗುಂಡಿಯಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ಮಳೆಯಿಂದ ಕಾಮಗಾರಿ ನಡೆಸಲು ಕಷ್ಟ
ಸ್ಥಳೀಯ ಕಾರ್ಪೊರೇಟರ್‌ ರಾಜೇಶ್‌ ಅವರು ‘ಉದಯವಾಣಿ ಸುದಿನ’ಕ್ಕೆ ಪ್ರತಿ ಕ್ರಿಯಿಸಿ, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಇರುವುದರಿಂದ ನಾವು ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ರಸ್ತೆ ಮಧ್ಯೆ ಗುಂಡಿಯಾದ ಕೂಡಲೇ ಸಂಬಂಧಪಟ್ಟ ಎಂಜಿನಿಯರ್‌ ಆದ ರಘುಪಾಲ್‌ ಮತ್ತು  ಅಶೋಕ್‌ ಅವರ ಗಮನಕ್ಕೆ ತಂದಿದ್ದೇನೆ. ನಗರದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಗುಂಡಿ ಬಿದ್ದ ಪ್ರದೇಶದ ನಾಲ್ಕೂ ಬದಿಗಳಲ್ಲಿ ಈ ಹಿಂದೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಆದರೆ ಅದನ್ನು ಯಾರು ತೆರವುಗೊಳಿಸಿದ್ದು ಎಂಬುವುದರ ಬಗ್ಗೆ ಮಾಹಿತಿ ಇಲ್ಲ ಎಂದರು.

ಕಳೆಪೆ ಕಾಮಗಾರಿ ಕಾರಣ
ಈ ರಸ್ತೆ ಡಾಮರು ಕಾಮಗಾರಿ ನಡೆಸಿ ಎರಡು ತಿಂಗಳು ಕೂಡ ಕಳೆದಿಲ್ಲ. ಮ್ಯಾನ್‌ ಹೋಲ್‌ ಸುತ್ತ ಹೊಂಡ ನಿರ್ಮಾಣವಾಗಿದೆ. ಇದಕ್ಕೆ ಕಳೆಪೆ ಕಾಮಗಾರಿಯೇ ಮುಖ್ಯ ಕಾರಣ. ಸಂಬಂಧಪಟ್ಟ ಅಧಿಕಾರಿಗಳಿಂದ ಈ ಬಗ್ಗೆ ತನಿಖೆ ಮಾಡಿಸಬೇಕು. ಕೂಡಲೇ ಸಮಸ್ಯೆ ಬಗೆಹರಿಯಬೇಕು.
– ವಿಜಯ ಕುಮಾರ್‌, ಲೋಹಿತ್‌ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next