Advertisement

ಡೆಡ್ಲಿ ಡ್ಯಾಡಿ,  ಮಗನ ನೋಡಿ!

11:27 AM Sep 26, 2017 | Team Udayavani |

“ಕ್ರೊಕೊಡೈಲ್‌ ಹಂಟರ್‌’ ಎಂದೇ ಖ್ಯಾತನಾಗಿದ್ದ ಆಸ್ಟ್ರೇಲಿಯಾದ ಸ್ಟೀವ್‌ ಇರ್ವಿನ್‌, ಅಪಾರ ಮೊಸಳೆ ಪ್ರೇಮಿಯಾಗಿದ್ದ. ಯಾರೂ ನೋಡಿರದಿದ್ದ, ಹೆಜ್ಜೆ ಮೂಡದ ಹಾದಿಗಳಲ್ಲೆಲ್ಲಾ ನುಗ್ಗಿ, ಮೈಕೈ ಕೆಸರು ಮಾಡಿಕೊಂಡು, ಮೊಸಳೆಗಳನ್ನು ಹಿಡಿದು ಸುರಕ್ಷಿತ ತಾಣಗಳಿಗೆ ಸೇರಿಸುವ ಕೆಲಸವನ್ನು ಮಾಡುತ್ತಿದ್ದ. ಈ ವನ್ಯಜೀವಿ ಪ್ರೇಮಿ, ಪೆಸಿಫಿಕ್‌ ಸಾಗರದಾಳದಲ್ಲಿ ಅಪಾಯಕಾರಿ ಮೀನುಗಳ ಕುರಿತು ಡಾಕ್ಯುಮೆಂಟರಿ ಶೂಟಿಂಗ್‌ ನಡೆಸುತ್ತಿದ್ದಾಗ ಸ್ಟಿಂಗ್‌ ರೇ ಎದೆಗೆ ಚುಚ್ಚಿ ಸಾವನ್ನಪ್ಪಿದ್ದ. ವನ್ಯಜೀವಿ ಪ್ರೇಮಿಯೊಬ್ಬ ವನ್ಯಜೀವಿಯಿಂದಲೇ ಪ್ರಾಣ ಕಳೆದುಕೊಂಡಿದ್ದನ್ನು ಇಡೀ ಜಗತ್ತು ಭಯಾಶ್ಚರ್ಯಗಳಿಂದ ನೋಡಿತ್ತು. ಇದಾಗಿ 11 ವರ್ಷಗಳ ನಂತರ, ಈಗ ಅವನ ಮಗ ಅಪ್ಪನ ಹಾದಿಯನ್ನು ಹಿಡಿದಿದ್ದಾನೆ. ಹೆಸರು ರಾಬರ್ಟ್‌ ಇರ್ವಿನ್‌, ವಯಸ್ಸು ಇನ್ನೂ 13!

Advertisement

ರಿಯಾಲಿಟಿ ಶೋಗಳ ಭರಾಟೆಯೇ ಇಲ್ಲದಿದ್ದ ಸಿಂಪಲ್‌ ದಿನಗಳವು. ಮಕ್ಕಳು, ದೊಡ್ಡವರಾದಿಯಾಗಿ ಟಿವಿ ಮುಂದೆ ಕುಳಿತವರೆಲ್ಲಾ ನ್ಯಾಷನಲ್‌ ಜಿಯೋಗ್ರಾಫಿಕ್ಕೋ, ಅನಿಮಲ್‌ ಕಿಂಗ್‌ಡಂ ಚಾನೆಲ್ಲನ್ನೋ ಆಶ್ಚರ್ಯಚಕಿತರಾಗಿ ನೋಡುತ್ತಾ ಕುಳಿತುಬಿಡುತ್ತಿದ್ದರು. ಬರೀ ತೇಜಸ್ವಿ ಪುಸ್ತಕಗಳಲ್ಲಿ ಓದಿದ್ದ, ಕಪ್ಪುಬಿಳುಪು ಪ್ರಾಣಿ ಚಿತ್ರಗಳನ್ನು ನೋಡಿದ್ದ ಜನರಿಗೆ ಈ ಚಾನೆಲ್ಲುಗಳು ಪ್ರತ್ಯಕ್ಷವಾಗಿ ಪರಿಸರದ ಕತೆಗಳ ನಾಯಕರುಗಳಾದ ಪ್ರಾಣಿ, ಪಕ್ಷಿಗಳನ್ನು ತೋರಿಸಿದ್ದವು. ಈ ಚಾನೆಲ್ಲುಗಳಲ್ಲಿ ಕಂಡುಬರುತ್ತಿದ್ದ ಅತ್ಯಂತ ಪರಿಚಿತ ಮುಖ ಸ್ಟೀವ್‌ ಇರ್ವಿನ್‌ನದು. “ಕ್ರೊಕೊಡೈಲ್‌ ಹಂಟರ್‌’ ಎಂದೇ ಖ್ಯಾತನಾಗಿದ್ದ ಇರ್ವಿನ್‌, ಮೊಸಳೆಗಳ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಹೆಸರು ಮಾಡಿದ್ದಾತ. ಆಸ್ಟ್ರೇಲಿಯಾದಲ್ಲಿ ಮೃಗಾಲಯವೊಂದನ್ನೂ ನಡೆಸುತ್ತಿದ್ದ. ಅವನು ಸತ್ತಾಗ ಪರಿಸರ ಸಂರಕ್ಷಕರು ಕಂಬನಿ ಮಿಡಿದಿದ್ದರು. 

ಅವನ ಮರಣಾನಂತರ ಝೂ ಉಸ್ತುವಾರಿಯನ್ನು ಪತ್ನಿ ಟೆರ್ರಿ ಮತ್ತು ಮಕ್ಕಳಾದ ಬಿಂಡಿ ಮತ್ತು ರಾಬರ್ಟ್‌ ನೋಡಿಕೊಳ್ಳುತ್ತಿದ್ದಾರೆ. ಹಿರಿಯವಳು ಬಿಂಡಿ, ಕಿರಿಯವ ರಾಬರ್ಟ್‌. ಅವರಿಬ್ಬರೂ ಚಿಕ್ಕ ವಯಸ್ಸಿನಲ್ಲೇ ಪ್ರಾಣಿ ಪ್ರಪಂಚದೊಳಕ್ಕೆ ಕಾಲಿಟ್ಟಿದ್ದಾರೆ. ಅದರಲ್ಲೂ ರಾಬರ್ಟ್‌ ಇದ್ದಾನಲ್ಲ, ಥೇಟ್‌ ಅಪ್ಪನಂತೆಯೇ! ಈಗಾಗಲೇ ಕಾಡು ಮೇಡು ಅಲೆಯುತ್ತಾ ಇಡೀ ಪ್ರಪಂಚವನ್ನು ಸುತ್ತಿಬಂದಿದ್ದಾನೆ. ಅವನ ವಯಸ್ಸಿನವರು ಮೊಬೈಲಿನಲ್ಲಿ ಗೇಮ್ಸ್‌ ಆಡುತ್ತಾ ಕಳೆದುಹೋಗಿದ್ದರೆ ಇವ ಮಾತ್ರ ಕತ್ತಿಗೆ ಕೆಜಿಗಟ್ಟಲೆ ತೂಕದ ಹೈ ಎಂಡ್‌ ಡಿ.ಎಸ್‌. ಎಲ್‌.ಆರ್‌ ಕ್ಯಾಮೆರಾಗಳನ್ನು ನೇತುಹಾಕಿಕೊಂಡು ವೈಲ್ಡ್‌ಲೈಫ್ ಫೋಟೋಗ್ರಫಿ ಮಾಡುತ್ತಿದ್ದಾನೆ.

ಅಪ್ಪನಂತೇ ಮಗ!
ತಂದೆಯಿಂದ ಪಿತ್ರಾರ್ಜಿತವಾಗಿ ಪರಿಸರಾಸಕ್ತಿ ಮತ್ತು ಎಂಟೆದೆ ಧೈರ್ಯವನ್ನು ಪಡೆದುಕೊಂಡಿರುವ ರಾಬರ್ಟ್‌, ಸ್ಟೀವ್‌ನ ಉತ್ತರಾಧಿಕಾರಿಯಂತೆ ತೋರುತ್ತಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಅವನಿಂದ ಪರಿಸರ ಪ್ರೇಮಿಗಳ ಜಗತ್ತು ಅಪ್ರತಿಮ ಸಾಹಸಗಳನ್ನೂ, ಸಹಾಯವನ್ನೂ ನಿರೀಕ್ಷಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕೆ, ಪತ್ರಿಕೆಗಳಲ್ಲಿ ರಾಬರ್ಟ್‌ ಫೋಟೋಗಳು ಆಗಿದ್ದಾಗ್ಗೆ ಪ್ರಕಟಗೊಳ್ಳುತ್ತಿರುತ್ತವೆ. ಹಲವು ಛಾಯಾಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾನೆ. ಹಾಲಿವುಡ್‌ ಟಾಕ್‌ ಶೋಗಳಲ್ಲಿ ಈತನ ಸಂದರ್ಶನವೂ ಪ್ರಸಾರಗೊಂಡಿವೆ.

ರಾಬರ್ಟ್‌ ಇರ್ವಿನ್‌ ವೆಬ್‌ಸೈಟಿಗೆ ಕೊಂಡಿ: www.robertirwinphotos.com

Advertisement
Advertisement

Udayavani is now on Telegram. Click here to join our channel and stay updated with the latest news.

Next