ಬೆಂಗಳೂರು: ಹೊಸಕೆರೆ ಹಳ್ಳಿ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಮೇಯರ್ ಜಿ.ಪದ್ಮಾವತಿ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹೊಸಕೆರೆ ಹಳ್ಳಿ ರಸ್ತೆಯ ಕೆಇಬಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಹಾಗೂ ಮುತ್ತರಾಜ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಗಳು ಆರಂಭವಾಗಿ ತಿಂಗಳುಗಳೇ ಕಳೆದಿದ್ದರೂ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದ ಆಗುತ್ತಿರುವ ತೊಂದರೆಗಳ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಮೇಯರ್ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ವಿಳಂಬದಿಂದ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತಿಂಗಳೊಳಗೆ ಕೆಇಬಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮಾವತಿ, ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಉದ್ದೇಶದಿಂದ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಅಪಘಾತಗಳು ಸಂಭವಿಸುತ್ತಿರುವ ಕುರಿತು ದೂರುಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿಸುವಂತೆ ಹಾಗೂ ಅಂಡರ್ ಪಾಸ್ ನಿರ್ಮಾಣ ಶೀಘ್ರ ಮುಗಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಅಂಡರ್ ಪಾಸ್‌ಗಾಗಿ ಮುತ್ತುರಾಜ ಜಂಕ್ಷನ್‌ನಲ್ಲಿ ಅಗೆದಿರುವ ಜಾಗದಲ್ಲಿ ಸುತ್ತಮುತ್ತಲಿನ ಭಾಗದ ಅಪಾರ್ಟ್‌ಮೆಂಟ್‌ನವರು ಕಟ್ಟಡ ಅವಶೇಷಗಳನ್ನು ಸುರಿದಿರುವುದನ್ನು ಗಮನಿಸಿದ ಮೇಯರ್, ಕಟ್ಟಡ ಅವಶೇಷಗಳನ್ನು ಸುರಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಹಾಗೂ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸುವಂತೆ ಸೂಚನೆ ನೀಡಿದರು.
ಯೋಜನೆಯ ವಿವರ
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್, ಫುಡ್ ವರ್ಲ್ಡ್ ಜಂಕ್ಷನ್ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಗಳೆಲ್ಲವೂ ಪೂರ್ಣಗೊಂಡರೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗಿನ ರಸ್ತೆ ಸಂಪೂರ್ಣವಾಗಿ ಸಿಗ್ನಲ್ ಮುಕ್ತವಾಗಲಿದೆ.