Advertisement

ನೋಂದಣಿ ಕೇಂದ್ರ ತೆರೆಯಲು ಗಡುವು

12:25 PM Jul 15, 2018 | Team Udayavani |

ಬೆಂಗಳೂರು: ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲರೂ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ ಆಗಸ್ಟ್‌ ಒಳಗಾಗಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ನೋಂದಣಿ ಕೇಂದ್ರಗಳನ್ನು ತೆರೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಅಜಯ್‌ ಸೇಠ್… ಸೂಚಿಸಿದ್ದಾರೆ.

Advertisement

ಈ ಸಂಬಂಧ ಗುರುವಾರ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು ಆಗಸ್ಟ್‌ ಅಂತ್ಯಕ್ಕೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಆರೋಗ್ಯ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. 

ಅಲ್ಲದೆ ಬೆಂಗಳೂರಿನಲ್ಲಿ ಆನೇಕಲ್‌ ತಾಲೂಕು ಆಸ್ಪತ್ರೆ, ಯಲಹಂಕ ಹಾಗೂ ಕೆ.ಆರ್‌.ಪುರ ಸಾರ್ವಜನಿಕ ಆಸ್ಪತ್ರೆಗಳಲ್ಲೂ ಆರೋಗ್ಯ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ನಗರದ ವಿಕ್ಟೋರಿಯಾ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಗಳಲ್ಲಿ ಕಾರ್ಡ್‌ ವಿತರಿಸಲಾಗುತ್ತಿದೆ.
 
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಒಟ್ಟು 11 ಸಂಸ್ಥೆಗಳಲ್ಲಿ ಆರೋಗ್ಯ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಜನ ಕಾರ್ಡ್‌ ಪಡೆಯಲು ಮುಗಿ ಬೀಳುತ್ತಿದ್ದಾರೆ.

ಯಶಸ್ವಿನಿ ಯೋಜನೆಯು ಮೇ ಅಂತ್ಯಕ್ಕೆ ವಿಲೀನಗೊಂಡಿರುವ ಹಿನ್ನೆಲೆಯಲ್ಲಿ ಕೆಲ ವಾರಗಳಿಂದ ಕಾರ್ಡ್‌ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಹಲವೆಡೆ ಕಾರ್ಡ್‌ ವಿತರಣೆ ಆರಂಭಿಸಬೇಕು ಎಂದು ಕೆಲ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವರ್ಷಾಂತ್ಯಕ್ಕೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆರೋಗ್ಯ ಕಾರ್ಡ್‌ ನೋಂದಣಿ ಪ್ರಾರಂಭಿಸಲು ಇಲಾಖೆ ಚಿಂತಿಸಿದೆ. ವಾರ್ಡ್‌ ಕಚೇರಿ, ಬೆಂಗಳೂರು ಒನ್‌ ರೀತಿಯ ಸೇವಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್‌ ನೋಂದಣಿಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಜನರಿಂದ ಸಾಕಷ್ಟು ಒತ್ತಾಯವಿದೆ ಎಂದು ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ಒಟ್ಟು 1.60 ಕೋಟಿ ಕುಟುಂಬಗಳಿಗೆ ಆರೋಗ್ಯ ಕಾರ್ಡ್‌ ವಿತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರಿ ಹೊಂದಿದ್ದು, ಈವರೆಗೆ 2.59 ಲಕ್ಷ ಮಂದಿ ಕಾರ್ಡ್‌ ಪಡೆದಿದ್ದಾರೆ

ಕಾರ್ಡ್‌ಗೆ ಸಾಲು
 ಆರೋಗ್ಯ ಕಾರ್ಡ್‌ ಪಡೆದುಕೊಳ್ಳಲು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಶನಿವಾರವೂ ಜನ ಸಾಲು
ಗಟ್ಟಿ ನಿಂತಿದ್ದರು. ಎರಡನೇ ಶನಿವಾರವಾದ್ದರಿಂದ ಮಧ್ಯಾಹ್ನದವರೆಗೂ ಆಸ್ಪತ್ರೆ ಸಿಬ್ಬಂದಿ ಕಾರ್ಡ್‌
ವಿತರಿಸಿದರು. ಸುಮಾರು 150 ಮಂದಿಗೆ ಆರೋಗ್ಯ ಕಾರ್ಡ್‌ ಲಭಿಸಿದ್ದು, ಉಳಿದವರು ಬರಿಗೈನಲ್ಲಿ ಹಿಂತಿರುಗುವಂತಾಯಿತು. ಶನಿವಾರ ದವರೆಗೆ ಬೆಂಗಳೂರಿನಲ್ಲಿ ಒಟ್ಟು 49,469 ಕಾರ್ಡ್‌ ವಿತರಣೆಯಾಗಿದೆ.

ಆರೋಗ್ಯ ಕಾರ್ಡ್‌ ಪಡೆಯಲು ಕಾಲಮಿತಿ ನಿಗದಿಪಡಿಸಿಲ್ಲ. ಆಗಸ್ಟ್‌ ಅಂತ್ಯಕ್ಕೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಕಾರ್ಡ್‌ ನೋಂದಣಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
 ಡಾ.ಶ್ರೀನಿವಾಸ್‌, ನಗರ ಆರೋಗ್ಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next