Advertisement

ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಗಡುವು

03:01 PM Jun 14, 2019 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಪ್ಯಾನ್‌ ಏಷಿಯಾ ಸೇರಿದಂತೆ ವಿವಿಧ ಏಜೆನ್ಸಿಗಳು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಗುತ್ತಿಗೆ ಪಡೆದಿವೆ. ಆದರೆ ಅವುಗಳು ಸಕಾಲಕ್ಕೆ ನಿರ್ಮಾಣ ಮಾಡುತ್ತಿಲ್ಲ. ಹಾಗಾಗಿ ಜನರು ಈಗಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಚೇರಿ ಆವರಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಅವಲೋಕಿಸಿ ಅಧಿಕಾರಿಗಳ, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲಾಗಿದೆ. ಹಲವು ಕಡೆ ಅವರು ಕೆಟ್ಟು ನಿಂತಿವೆ. ಕೆಲವು ಕಡೆ ಇನ್ನೂ ಯಂತ್ರ ಅಳವಡಿಕೆ ಮಾಡಿಲ್ಲ. ಇನ್ನು ಕೆಲವೆಡೆ ಬೇಸಮೆಂಟ್ ಹಾಕಿ ಕೈ ಬಿಡಲಾಗಿದೆ. ಈ ಬಗ್ಗೆ ಯಾರನ್ನು ಕೇಳಬೇಕೆಂದರೂ ಯಾವುದೂ ಪ್ರತಿಕ್ರಿಯೆ ಸಿಗುತ್ತಿಲ್ಲ. ನನ್ನ ಕ್ಷೇತ್ರದಲ್ಲಿ ನಾನೇ ಕಾರ್ಯಕರ್ತನಿಗೆ ಹಣ ಕೊಟ್ಟು ದುರಸ್ತಿ ಕೆಲಸ ಮಾಡಿಸಿದ್ದೇನೆ. ನೀವೆಲ್ಲ ಏನು ಮಾಡುತ್ತಿದ್ದೀರಿ ಎಂದು ಪ್ಯಾನ್‌ ಏಷಿಯಾ ಸೇರಿ ವಿವಿಧ ಏಜೆನ್ಸಿಗಳ ವಿರುದ್ಧ ಗುಡುಗಿದರು.

ನಾವು ನಿತ್ಯ ಗ್ರಾಮೀಣ ಪ್ರದೇಶದಲ್ಲೇ ಇರೋರು. ಪ್ರತಿದಿನ ಜನತೆ ನೀರಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ತರುತ್ತಾರೆ. ನಾವು ಅವರಿಗೆ ಉತ್ತರ ನೀಡಬೇಕಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬರಿ ಪ್ರಗತಿಯಲ್ಲಿದೆ ಎನ್ನುವ ಉತ್ತರ ನೀಡುತ್ತಿದ್ದೀರಿ. ಶುದ್ಧ ಘಟಕಗಳ ನಿರ್ಮಾಣದಲ್ಲಿ ಉಪ ಗುತ್ತಿಗೆ ಪಡೆದು ಕಾಮಗಾರಿ ಅರ್ಧ ಮಾಡುತ್ತಿರಿ. ಕೂಡಲೇ ಅರೆಬರೆ ಕೆಲಸ ಮಾಡಿದ ಏಜೆನ್ಸಿಗಳ ಬಿಲ್ಗಳನ್ನು ತಡೆ ಹಿಡಿಯುವಂತೆ ಇಲಾಖೆಯ ಅಭಿಯಂತರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಯಿತು. ನಮಗೆ ಏನೇ ಸಮಸ್ಯೆ ಇದ್ದರೂ ಜನತೆಗೆ ನೀರು ಕೊಡಬೇಕು. ಬಂದ ಅನುದಾನ ಖರ್ಚು ಆಗುತ್ತಿದೆ. ಆದರೆ ಸಮಸ್ಯೆ ಹಾಗೆ ಉಳಿಯುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ಸಭೆ ಕರೆದರೆ ನಮಗೆ ಸರಿಯಾದ ಮಾಹಿತಿ ಕೊಡಲ್ಲ. ಅಧಿಕಾರಿಗಳು ಸಕಾಲಕ್ಕೆ ಸಭೆಗೆ ಆಗಮಿಸಲ್ಲ. ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.

Advertisement

300ಕ್ಕೂ ಹೆಚ್ಚು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಎಂದು ಹೇಳುತ್ತೀರಿ. ಆದರೆ ಅವುಗಳಿಗೆ ಏನು ಪರಿಹಾರ ತಗೆದುಕೊಂಡಿದ್ದೀರಿ? ಎಲ್ಲಿ ಕೆಲಸ ಮಾಡಿದ್ದೀರಿ ನನಗೆ ವರದಿ ಕೊಡಬೇಕು. ಪ್ಯಾನ್‌ ಏಷಿಯಾ ಸೇರಿ ಎಲ್ಲ ಏಜೆನ್ಸಿಗಳ ಬಿಲ್ ತಡೆ ಹಿಡಿದು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಬಾಕಿ ಕೆಲಸ ಮಾಡಿದರಷ್ಟೇ ಹಣ ಬಿಡುಗಡೆ ಮಾಡಬೇಕು ಎಂದರಲ್ಲದೇ, ನೀರಿನ ಸಮಸ್ಯೆ ಬಗ್ಗೆ ನಾನು ಜಿಪಂ ಸಭೆಯಲ್ಲಿ ಸದಸ್ಯರಿಗೆ ಉತ್ತರ ಕೊಡಬೇಕು ಎಂದರು.

ಬಹುಗ್ರಾಮ ಯೋಜನೆಗೆ ಗರಂ: ಇನ್ನೂ ಕೊಪ್ಪಳ ತಾಲೂಕಿನ 64 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದೆ ಎಂದು ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಾರೆ. ಅದು ಡಿಸೈನ್‌ ಫೇಲ್ ಆಗಿದೆ ಎಂದು ಹೇಳುತ್ತಿದ್ದೀರಿ. ಅದಕ್ಕೆ ಮುಂದೆ ಪರಿಹಾರವೇನು? ಏಕೆ ಅರ್ಧಕ್ಕೆ ನಿಂತಿದೆ ಎಂಬ ಉತ್ತರ ಬೇಕು. ಸುಮ್ಮನೆ ಹಾರಿಕೆಯ ಉತ್ತರ ಹೇಳಬೇಡಿ. ನಾನೇ ಅಲ್ಲಿಗೆ ತೆರಳಿ ಪರಿಶೀಲನೆ ಮಾಡುವೆ ಎಂದರಲ್ಲದೇ, ಯಲಬುರ್ಗಾ-ಕುಷ್ಟಗಿ ತಾಲೂಕಿನ 700 ಕೋಟಿ ರೂ. ಮೊತ್ತದ ಬಹು ದೊಡ್ಡ ಕುಡಿಯುವ ನೀರಿನ ಯೋಜನೆಗೆ ಹುನಗುಂದ ಭಾಗದಲ್ಲಿ ತೊಂದರೆಯಾಗುತ್ತಿದೆ. ಅಲ್ಲಿ ಏನು ಸಮಸ್ಯೆ ಎಂಬುದು ಪಕ್ಕಾ ತಿಳಿಯಬೇಕು. ನಮ್ಮ ಜನರಿಗೆ ನೀರಿನ ಸಮಸ್ಯೆಯಾಗದಂತೆ ಸರ್ಕಾರದ ಮಟ್ಟದಲ್ಲಿ ಜಿಪಂನಿಂದ ಒತ್ತಡ ಹಾಕಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕೆಂದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎನ್‌.ಕೆ. ತೊರವಿ, ಕುಡಿಯುವ ನೀರು ಸರಬರಾಜು ಉಪ ವಿಭಾಗದ ಅಭಿಯಂತರ ತಿರಕನಗೌಡರ್‌ ಸೇರಿದಂತೆ ವಿವಿಧ ತಾಲೂಕಿನ ಎಇಇಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next