Advertisement

ವಾಣಿವಿಲಾಸ ಸಾಗರಕ್ಕೆ ಡೆಡ್‌ ಸ್ಟೋರೇಜ್‌ ಭೀತಿ

09:02 AM May 18, 2019 | Sriram |

ಚಿತ್ರದುರ್ಗ: ಜಿಲ್ಲೆಯ ಏಕೈಕ ಅಣೆಕಟ್ಟು ಎನಿಸಿಕೊಂಡಿರುವ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಭೀತಿ ಎದುರಾಗಿದ್ದು, ಡೆಡ್‌ ಸ್ಟೋರೇಜ್‌ ಹಂತ ತಲುಪಿದೆ.

Advertisement

ವಿವಿ ಸಾಗರ ಜಲಾಶಯದ ಡೆಡ್‌ ಸ್ಟೋರೇಜ್‌ 60 ಅಡಿ ಇದ್ದು, ಏ.29ರಂದು ಜಲಾಶಯದಲ್ಲಿದ್ದ ನೀರಿನ ಪ್ರಮಾಣ 61 ಅಡಿ ಮಾತ್ರ. 2017ರಲ್ಲಿ 66 ಅಡಿ ಹಾಗೂ 2018ರಲ್ಲಿ 68 ಅಡಿ ನೀರಿನ ಪ್ರಮಾಣ ಇತ್ತು. 2019ರಲ್ಲಿ 61 ಅಡಿ ತಲುಪಿದೆ. ಅಂದರೆ ಹೆಚ್ಚುವರಿಯಾಗಿ ಒಂದು ಅಡಿ ನೀರಿದ್ದು, ಇಲ್ಲಿಂದ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ನಗರಗಳು ಸೇರಿದಂತೆ ಮಾರ್ಗ ಮಧ್ಯದ ಹಳ್ಳಿಗಳು ಹಾಗೂ ಚಳ್ಳಕೆರೆ ತಾಲೂಕಿನ ಕುದಾಪುರದಲ್ಲಿರುವ ಡಿಆರ್‌ಡಿಒಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಡೆಡ್‌ ಸ್ಟೋರೇಜ್‌ಗಿಂತ ಕೆಳಗಿನ ನೀರು ಬಳಕೆ ಅಪಾಯದ ಸಂಕೇತವಾಗಿದೆ.

ಜಿಲ್ಲೆಯ ಬರ ಪರಿಸ್ಥಿತಿ ಕಂಡು ಶತಮಾನದ ಹಿಂದೆಯೇ ವಾಣಿವಿಲಾಸ ಸಾಗರ ಜಲಾಶಯವನ್ನು ಪ್ರಮುಖವಾಗಿ ಕೃಷಿ ಉದ್ದೇಶಕ್ಕಾಗಿಯೇ ನಿರ್ಮಾಣ ಮಾಡಲಾಗಿದೆ. ಈ ಜಲಾಶಯವನ್ನು ನಂಬಿ ಕೃಷಿ ಮಾಡುತ್ತಿದ್ದ ರೈತರ ಬಹುತೇಕ ತೋಟಗಳು ಒಣಗಿ ಹೋಗಿವೆ. ಅಚ್ಚುಕಟ್ಟು ಪ್ರದೇಶದ ಬಹುತೇಕ ಹಳ್ಳಿಗಳಿಗೆ ಟ್ಯಾಂಕರ್‌ ನೀರು ಆಧಾರ. ಸಾವಿರ ಅಡಿ ಕೊರೆದರೂ ಹನಿ ನೀರು ಬಾರದೆ, ಕುಡಿವ ನೀರಿನ ಸಮಸ್ಯೆ ದಿನೇ ದಿನೆ ಉಲ್ಬಣಿಸುತ್ತಿದೆ.

ವಿವಿ ಸಾಗರ ಇತಿಹಾಸ: ವಾಣಿವಿಲಾಸ ಸಾಗರ ಜಲಾಶಯ ಹಿರಿಯೂರು ತಾಲೂಕಿನ ಮಾರಿಕಣಿವೆ ಹಳ್ಳಿ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1898-1907ರ ಅವಧಿಯಲ್ಲಿ ನಿರ್ಮಾಣವಾಗಿದೆ. ವೇದಾವತಿ ನದಿ, ಕೃಷ್ಣಾ ನದಿಯ ಉಪ ನದಿಯಾಗಿದೆ. 43.28 ಮೀಟರ್‌ ಎತ್ತರ (142 ಅಡಿ) ಮತ್ತು 405.50 ಮೀಟರ್‌ ಉದ್ದದ ನಾನ್‌ ಓವರ್‌ ಪ್ಲೋ ಅಣೆಕಟ್ಟು ನಿರ್ಮಾಣ ಮಾಡಿ 25,000 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಅಣೆಕಟ್ಟು ನಿರ್ಮಾಣದಿಂದ ಜಲಾಶಯದ ಒಟ್ಟಾರೆ ಸಂಗ್ರಹ ಸಾಮರ್ಥ್ಯ 850.30 (30ಟಿಎಂಸಿ). ಜಲಾವೃತ ಪ್ರದೇಶ 5374 ಚದರ ಕಿಮೀ (2075 ಚದರ ಮೈಲಿ) ಆಗಿದೆ.

ಡೆಡ್‌ ಸ್ಟೋರೇಜ್‌ 60 ಅಡಿ ತಲುಪಿದ್ದು, ಇದರ ಕೆಳಗಿನ ನೀರು
ಬಳಕೆ ಮಾಡಬೇಕಾದರೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ.ಆದರೆ ಡೆಡ್‌ ಸ್ಟೋರೇಜ್‌ ಕೆಳಗಿನ ನೀರು ಬಳಕೆ ಮಾಡುವುದರಿಂದ ಅಣೆಕಟ್ಟೆಗೆ ತಾಂತ್ರಿಕವಾಗಿ ಯಾವುದೇ ಅಪಾಯ ಇಲ್ಲ.
– ಶಿವಕುಮಾರ್‌, ಭದ್ರಾ ಮೇಲ್ದಂಡೆ
ಯೋಜನೆಯ ಮುಖ್ಯ ಎಂಜಿನಿಯರ್‌

Advertisement

ಅಣೆಕಟ್ಟೆ ನಿರ್ಮಾಣ ಮಾಡಿ 112 ವರ್ಷಗಳು ಕಳೆದ ನಂತರ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹನಿ ನೀರಿಗೆ ನಿತ್ಯ ಕಾದಾಟವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಣೆಕಟ್ಟೆ ಬತ್ತಿ ಹೋಗುವ ಸಾಧ್ಯತೆ ಇದೆ.
– ಎ. ಉಮೇಶ್‌, ವಿವಿ ಪುರ

-ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next