ಮಂಗಳೂರು: ಶನಿವಾರ ಮಧ್ಯರಾತ್ರಿಯ ಸುಮಾರಿಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದ ಒಂದೇ ಕುಟುಂಬದ ಮೂವರ ಯುವತಿಯೊಬ್ಬಳ ಮೃತದೇಹ ಇಂದು ಪತ್ತೆಯಾಗಿದೆ.
ಮೃತಪಟ್ಟ ಯುವತಿಯನ್ನು ಕಲ್ಪನಾ ಮಂದಣ್ಣ (20) ಎಂದು ಗುರುತಿಸಲಾಗಿದೆ. ಇವರ ಮೃತದೇಹ ಇನೋಳಿಯ ಕೊರಿಯಾ ಸಮೀಪ ಆದಿತ್ಯವಾರ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.
ಮೈಸೂರು ನೋಂದಣಿ ಸಂಖ್ಯೆ ಹೊಂದಿರುವ ಮಾರುತಿ ಇಕೋ ಕಾರಿನಲ್ಲಿ ಆಗಮಿಸಿದ್ದ ಮೂವರು ಪಾಣೆಮಂಗಳೂರು ಸೇತುವೆಯ ಮೇಲೆ ತಮ್ಮ ಕಾರನ್ನು ನಿಲ್ಲಿಸಿ ಮೊದಲಿಗೆ ನಾಯಿಯನ್ನು ನದಿಗೆ ಎಸೆದು ಬಳಿಕ ಮೂವರು ನದಿಗೆ ಹಾರಿದ್ದರು ಎನ್ನಲಾಗುತ್ತಿದೆ.
ಬಳಿಕ ನದಿಗೆ ಹಾರಿದವರು ವಿರಾಜಪೇಟೆ ಮೂಲದವರು ಎಂದು ಪತ್ತೆಯಾಗಿತ್ತು. ಅವರಲ್ಲಿ ಓರ್ವ ಮಹಿಳೆಯನ್ನು ಸ್ಥಳೀಯರು ನದಿ ನೀರಿನಿಂದ ಮೇಲೆ ತಂದು ರಕ್ಷಿಸಿದ್ದರಾದರೂ ಬಳಿಕ ಆ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತ ಮಹಿಳೆಯನ್ನು ಕವಿತಾ ಮಂದಣ್ಣ ಎಂದು ಗುರುತಿಸಲಾಗಿತ್ತು. ಇನ್ನು ಇವರ ಇಬ್ಬರು ಮಕ್ಕಳಾದ ಕೌಶಿಕ್ ಹಾಗೂ ಕಲ್ಪಿತಾ ಅವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಲಾಗಿತ್ತು. ಇದೀಗ ಕಲ್ಪಿತಾ ಅವರ ಮೃತದೇಹ ಪತ್ತೆಯಾಗಿದ್ದು ಕೌಶಿಕ್ ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ.