ಕಾಪು: ಕಾಪು ಬೀಚ್ ಬಳಿ ಬೈಕ್ ಮತ್ತಿತರ ಸೊತ್ತುಗಳನ್ನು ಬಿಟ್ಟು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಕಾಪು ಪಡು ಗ್ರಾಮ ನಿವಾಸಿ ಕರಣ್ ಸಾಲ್ಯಾನ್ (20) ಮೃತದೇಹ ಪಡುಕರೆ ಸಮುದ್ರದಲ್ಲಿ ಪತ್ತೆಯಾಗಿದೆ.
ಕಾಪು ಪಡು ಗ್ರಾಮ ನಿವಾಸಿ ನಾರಾಯಣ್ ಸಾಲ್ಯಾನ್ ಅವರ ಪುತ್ರ ಕರಣ್ ಸಾಲ್ಯಾನ್ ಜೂ. 5ರಂದು ಅಪರಾಹ್ನ 3 ಗಂಟೆಗೆ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದ. ಮನೆಯಿಂದ ನಾಪತ್ತೆಯಾಗಿದ್ದ ಆತನ ಬೈಕ್, ಬೆಲೆಬಾಳುವ ಐಫೋನ್, ನಗದು ಸಹಿತವಾಗಿ ಪರ್ಸ್ ಕಾಪು ಬೀಚ್ ಬಳಿ ಪತ್ತೆಯಾಗಿತ್ತು. ಆ ಬಳಿಕ ಮನೆಯವರು ಮತ್ತು ಸ್ಥಳೀಯರು ಕಾಪು ಬೀಚ್ ಬಳಿ, ಸಮುದ್ರದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೊದಲಾದವರು ಬೀಚ್‌ಗೆ ತೆರಳಿ ಮನೆಯವರನ್ನು ಸಂತೈಸಿದ್ದರು. ಮಗ ನಾಪತ್ತೆಯಾಗಿರುವ ಬಗ್ಗೆ ನಾರಾಯಣ್ ಸಾಲ್ಯಾನ್ ಯಾನೆ ತುಳಸಿ ಅವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೂಡಾ ತನಿಖೆ ಮುಂದುವರಿಸಿದ್ದರು.
ಈ ಮಧ್ಯೆ ಶುಕ್ರವಾರ ಮಧ್ಯಾಹ್ನ ಪಡುಕೆರೆ ಸಮುದ್ರದಲ್ಲಿ ಮೃತದೇಹವೊಂದು ತೇಲಿಕೊಂಡು ಬರುತ್ತಿರುವುದನ್ನು ಗಮನಿಸಿದ್ದ ಸ್ಥಳೀಯರು ಮೃತದೇಹವನ್ನು ಬದಿಗೆ ತಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ನಾಪತ್ತೆಯಾಗಿದ್ದ ಕರಣ್‌ನ ಮನೆಯವರಿಗೆ ಮಾಹಿತಿ ತಲುಪಿಸಿದ್ದು, ಅವರು ಸ್ಥಳಕ್ಕೆ ಹೋಗಿ ನೋಡಿ, ಮೃತದೇಹದ ಗುರುತು ಪತ್ತೆ ಹಚ್ಚಿದರು. ಬಳಿಕ ಕಾಪು ಸೂರಿ ಶೆಟ್ಟಿ ನೇತೃತ್ವದಲ್ಲಿ ಮೃತದೇಹವನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ತಿಂಗಳಾಂತ್ಯಕ್ಕೆ ವಿದೇಶಕ್ಕೆ ತೆರಳಬೇಕಿತ್ತು
ಮೃತ ಕರಣ್ ಸಾಲ್ಯಾನ್ ತಿಂಗಳಾಂತ್ಯಕ್ಕೆ ಯುರೋಪ್ ರಾಷ್ಟ್ರಕ್ಕೆ ತೆರಳುವವನಿದ್ದ. ಮನೆಗೆ ಆಶ್ರಯನಾಗಬೇಕಿದ್ದ ಮಗ ವಿದೇಶಕ್ಕೆ ಹೋಗುವ ಕೆಲವೇ ದಿನಗಳ ಮೊದಲು ದಿಢೀರ್ ನಾಪತ್ತೆಯಾಗಿ, ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದು ತಂದೆ ಮತ್ತು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.