Advertisement

ಡೆಲ್ಲಿ-ಆರ್‌ಸಿಬಿ: ಬಿದ್ದವರ ಗುದ್ದಾಟ

06:00 AM May 12, 2018 | Team Udayavani |

ಹೊಸದಿಲ್ಲಿ: ಶನಿವಾರ “ಫಿರೋಜ್‌ ಷಾ ಕೋಟ್ಲಾ’ದಲ್ಲಿ ಬಿದ್ದವರ ನಡುವಿನ ಗುದ್ದಾಟವೊಂದು ನಡೆಯಲಿದೆ. ಇದು “ಸೋಲಿನ ರಾಯಭಾರಿ’ಗಳ ನಡುವಿನ ಸೆಣಸಾಟ. ಈಗಾಗಲೇ ಕೂಟದಿಂದ ಹೊರಬಿದ್ದಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ಮತ್ತು ಉಳಿದ ನಾಲ್ಕೂ ಪಂದ್ಯ ಗೆದ್ದರೆ ತನಗೂ ಮುಂದಿನ ಸುತ್ತಿನ ಅವಕಾಶ ಸಿಗಬಹುದೇ ಎಂದು ಇಣುಕುತ್ತಿರುವ ರಾಯಲ್‌ ಚಾಲೆಂಜರ್ ದ್ವಿತೀಯ ಸುತ್ತಿನಲ್ಲಿ ಪರಸ್ಪರ ಎದುರಾಗಲಿವೆ. 

Advertisement

ಟಿ20 ಪಂದ್ಯಗಳನ್ನು ಯಾವೆಲ್ಲ ರೀತಿಯಲ್ಲಿ ಸೋಲಬಹು ದೆಂಬುದನ್ನು ಈ ತಂಡಗಳು ಕಳೆದ ಕೆಲವು ವರ್ಷಗಳಿಂದ ತೋರಿಸುತ್ತ ಬಂದಿವೆ. ಇದು 11ನೇ ಐಪಿಎಲ್‌ನಲ್ಲೂ ಮುಂದುವರಿದಿದೆ. ಯಾರು ಬೇಗ ಕೂಟದಿಂದ ನಿರ್ಗಮಿ ಸಬಹುದೆಂಬ ಪೈಪೋಟಿಯೊಂದು ಇತ್ತಂಡಗಳ ನಡುವೆ ಕಂಡುಬಂದಿತ್ತು. ಇದರಲ್ಲಿ ಡೆಲ್ಲಿ ಮೇಲುಗೈ ಸಾಧಿಸಿದೆ. ಆರ್‌ಸಿಬಿ ಕೂಡ ಹೊರಬಿದ್ದರೂ ಇದು ಅಧಿಕೃತಗೊಳ್ಳಲು ಒಂದು ಸೋಲಿನ ಅಗತ್ಯವಿದೆ. ಇದು ಕೋಟ್ಲಾದಲ್ಲಿ ಲಭಿಸಿದರೂ ಅಚ್ಚರಿ ಇಲ್ಲ.

ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಡೆಲ್ಲಿಯನ್ನು ಮಣಿಸಿತ್ತು. ಇದು ರಿಷಬ್‌ ಪಂತ್‌ (85) ಮತ್ತು ಎಬಿ ಡಿ ವಿಲಿಯರ್ (ಅಜೇಯ 90) ನಡುವಿನ ಹೋರಾಟವಾಗಿತ್ತು. ಅಂದಿನಿಂದ ಪಂತ್‌ ಇದೇ ಲಯವನ್ನು ಕಾಯ್ದುಕೊಂಡರೆ, ಎಬಿಡಿ ಮ್ಯಾಜಿಕ್‌ ಎಲ್ಲೋ ಕಳೆದು ಹೋದಂತಿದೆ. ಮೆಕಲಮ್‌, ಡಿ ಕಾಕ್‌, ಮನ್‌ದೀಪ್‌, ವಾಷಿಂಗ್ಟನ್‌ ಸುಂದರ್‌ ಹೆಸರು ಅಷ್ಟೇನೂ ಚಾಲ್ತಿಗೆ ಬರಲಿಲ್ಲ. ವಿರಾಟ್‌ ಕೊಹ್ಲಿ ಮಾತ್ರ ಆಗಾಗ ಮಿಂಚುತ್ತ 396 ರನ್‌ ಪೇರಿಸಿದ್ದಾರೆ. 

ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲು ಎರಡೂ ತಂಡಗಳನ್ನು ಕಾಡುತ್ತಿದೆ. ಕೊಹ್ಲಿ ಪಡೆ ಹೈದರಾಬಾದ್‌ನಲ್ಲಿ 147 ರನ್‌ ಗಳಿಸಲಾಗದೆ ಪರಿತಪಿಸಿತ್ತು. ಇತ್ತ ತವರಿನ ಕೋಟ್ಲಾದಲ್ಲೇ ಡೆಲ್ಲಿ ಇದೇ ಹೈದರಾಬಾದ್‌ಗೆ 9 ವಿಕೆಟ್‌ಗಳಿಂದ ಶರಣಾಗಿತ್ತು. ಆದರೆ ಶನಿವಾರ ಒಂದು ತಂಡ ಜಯ ಸಾಧಿಸುವುದರಲ್ಲಿ ಅನುಮಾನವಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next