ಕಲಬುರಗಿ: ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸದ್ಯ ಬೆಂಗಳೂರು ಉತ್ತರ ವಲಯ ಡಿಸಿಪಿ ಶಶಿಕುಮಾರ ಕಳೆದ ಎರಡು ದಿನಗಳಿಂದ ಕಲಬುರಗಿಯಲ್ಲಿ ಠಿಕಾಣಿ ಹೂಡಿದ್ದು, ಚುನಾವಣಾ ಅಕ್ರಮಕ್ಕೆ ಕೈ ಜೋಡಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ಭಾನುವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಮೂರು ವರ್ಷಗಳ ಕಾಲ ಎಸ್ಪಿಯಾಗಿ ಕೆಲಸ ಮಾಡಿರುವ ಶಶಿಕುಮಾರ ಜಿಲ್ಲೆಯ ಎಲ್ಲ ಆಯಾಮಗಳನ್ನು ಬಲ್ಲವರಾಗಿದ್ದರಿಂದ ಕಾಂಗ್ರೆಸ್ ಪರ ಕೆಲಸ ಮಾಡಲು ಬಂದಿದ್ದಾರೆ. ಆದ್ದರಿಂದ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕೆಂದು ಅಭ್ಯರ್ಥಿ ಡಾ| ಉಮೇಶ ಜಾಧವ ಹಾಗೂ ಪಕ್ಷದ ಮುಖಂಡರು ದೂರು ಸಲ್ಲಿಸಿದರು. ರಜೆ ಮೇಲೆ ಈಗ ಕಲಬುರಗಿಗೆ ಬರುವ ಅವವಶ್ಯತೆ ಏನಿತ್ತು? ಆದ್ದರಿಂದ ವಿಚಾರಿಸಿ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ| ಉಮೇಶ ಜಾಧವ, ಸೋಲಿನ ಭೀತಿ ಹಿನ್ನೆಲೆಯಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ಆದ್ದರಿಂದ ಶಾಂತಿಯುತ, ಪಾರದರ್ಶಕ ಹಾಗೂ ಭಯ ಮುಕ್ತ ಚುನಾವಣೆ ನಡೆಯಬೇಕು. ಬಂದೋಬಸ್ತ್ಗೆ ವಿಶೇಷ ಕಾರ್ಯಪಡೆ ರೂಪಿಸಬೇಕು.
ಕೆಲವು ರೌಡಿಗಳು ಜನರಿಗೆ ಮತ ಹಾಕದಿರುವಂತೆ ಬೆದರಿಕೆ ಹಾಕುತ್ತಿರುವುದು ವರದಿಯಾಗಿದೆ. ಆದ್ದರಿಂದ ಮತದಾರರು ಪ್ರಜಾಪ್ರಭುತ್ವ ಗೆಲ್ಲಬೇಕಾದರೆ ಯಾರಿಗೂ ಹೆದರಬಾರದು. ತಮ್ಮ ಹಕ್ಕು ಚಲಾಯಿಸಿದರೆ ಮಾತ್ರ ನ್ಯಾಯ ಕಲ್ಪಿಸಿದಂತಾಗುತ್ತದೆ. ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವ ನಿಟ್ಟಿನಲ್ಲಿ ಚುನಾವಣೆ ನಡೆದರೆ ನಾನು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಎರಡು ದಿನಗಳ ಹಿಂದೆ ನಡೆದ ಎಸ್ಸಿ ಸಮಾವೇಶದಲ್ಲಿ ಬಿಜೆಪಿಗೆ ಹೊಸದಾಗಿ ಬಂದಿದ್ದೇನೆ. ಇನ್ನೂ ಸೆಟ್ ಆಗಿಲ್ಲ. ಸೆಟ್ ಆಗ್ತಾ ಇದ್ದೇನೆ. ಅದಕ್ಕಾಗಿ ತಮ್ಮಂತಹ ಹಿರಿಯರ ಆಶೀರ್ವಾದ ಬೇಕೆಂದು ಗೋವಿಂದ ಕಾರಜೋಳ ಅವರನ್ನು ಉದ್ದೇಶಿಸಿ ಹೇಳಲಾಗಿದೆಯೇ ಹೊರತು ಬೇರೆನೂ ಅರ್ಥ ಇಲ್ಲ.
-ಡಾ| ಉಮೇಶ ಜಾಧವ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ