ಬೆಂಗಳೂರು: ನಿಗಮ-ಮಂಡಳಿಗಳಲ್ಲಿ ಕಣ್ತಪ್ಪಿನಿಂದಾಗುವ ಅವಾಂತರಗಳಿಂದ ನೀವೂ ಕಳೆದು ಹೋಗುವುದಲ್ಲದೆ, ಪಕ್ಷಕ್ಕೂ ಮುಜುಗರ ಉಂಟಾಗುತ್ತದೆ. ಆದ್ದರಿಂದ ಹಣ ವರ್ಗಾವಣೆ ಸಹಿತ ಯಾವುದೇ ವಿಚಾರಗಳಲ್ಲಿ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಮುಂದೆ ಯಾವುದೇ ಗೊಂದಲಗಳು ಅಥವಾ ಅವಾಂತರಗಳು ಆಗದಂತೆ ನೋಡಿಕೊಳ್ಳಬೇಕು…
ಇದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದಿಂದ ಮಾಜಿ ಸಚಿವ ನಾಗೇಂದ್ರ ಅವರ ತಲೆದಂಡದ ಬೆನ್ನಲ್ಲೇ ಉಳಿದ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಎಚ್ಚರಿಕೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಿಗಮ-ಮಂಡಳಿಗಳ ಅಧ್ಯಕ್ಷರೊಂದಿಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಯಿತು.
ಭೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಗಳಲ್ಲಿ ರಾಜಕೀಯವಾದ ಪ್ರಮಾದಗಳಾವುದೂ ಇರಲಿಲ್ಲ. ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಬೆಲೆ ತೆರಬೇಕಾಯಿತು. ಸಾಧ್ಯವಾದಷ್ಟು ಎಚ್ಚರಿಕೆಯಿಂದ, ಅದರಲ್ಲೂ ಹಣ ವರ್ಗಾವಣೆಯಂತಹ ವಿಚಾರಗಳಲ್ಲಿ ಮೈಯೆಲ್ಲ ಕಣ್ಣಾಗಿರಬೇಕು. ಸ್ವಲ್ಪ ಯಾಮಾರಿದರೂ ಕಳೆದು ಹೋಗುತ್ತೀರಿ ಎಂದರು.
ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು. ಆಯಾ ನಿಗಮ- ಮಂಡಳಿಗಳಲ್ಲಿ ಸರಕಾ ಲಭ್ಯವಿರುವ ಅವಕಾಶಗಳ ಬಗ್ಗೆ ಒಂದು ಕರಪತ್ರ ಅಥವಾ ಕಿರುಹೊತ್ತಿಗೆ ಮೂಲಕ ಎಲ್ಲ ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ತಿಳಿವಳಿಕೆ ಮೂಡಿಸಬೇಕು. ತಾವು ಪ್ರವಾಸ ಮಾಡುವಾಗ ಜಿಲ್ಲಾ/ ತಾಲ್ಲೂಕು ಕಾಂಗ್ರೆಸ್ ಸಮಿತಿಗೆ ಭೇಟಿ ನೀಡಿ, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತಮ್ಮ ನಿಗಮ-ಮಂಡಳಿಯ ಸಾಧನೆಗಳ ಜತೆಗೆ ಸೌಲಭ್ಯಗಳ ಬಗ್ಗೆ ಸುದ್ದಿಗೋಷ್ಠಿಗಳ ಮೂಲಕ ಜನರಿಗೆ ತಲುಪಿಸಬೇಕು ಎಂದು ಸೂಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ನಿಗಮ ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಜನರ ಬಳಿ ವರ್ತನೆ ಹೇಗಿರಬೇಕು, ಕೆಲಸಗಳನ್ನು ಹೇಗೆ ಮುನ್ನಡೆಸಿ ಕೊಂಡು ಹೋಗಬೇಕು ಎಂದು ಸಲಹೆ ನೀಡ ಲಾಯಿತು. ಕೆಲವೊಂದಿಷ್ಟು ಜನ ಟ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
– ಡಿ.ಕೆ. ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ