Advertisement

ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ದಲಿತ, ಮುಸ್ಲಿಮರಿಗೆ ಡಿಸಿಎಂ ಸ್ಥಾನ

06:40 AM Nov 28, 2017 | |

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

Advertisement

ಪುರಭವನದಲ್ಲಿ ದಲಿತ ಸಂಘಟನೆಗಳ ಮುಖಂಡರ ಜತೆ ಸಂವಾದ ನಡೆಸಿದ ಅವರು, ನಾನು ಮುಖ್ಯಮಂತ್ರಿಯಾದರೆ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಠಿಸಿ ಒಂದು ದಲಿತರಿಗೆ, ಮತ್ತೂಂದು ಮುಸ್ಲಿಂ ಸಮುದಾಯಕ್ಕೆ ನೀಡುತ್ತೇನೆ.  ಈ ಮಾತಿಗೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.

ನಾನು ಬಡ್ತಿ ಮೀಸಲಾತಿ ವಿರೋಧಿಯಲ್ಲ. ಬೆಳಗಾವಿ ಅಧಿವೇಶನದಲ್ಲಿ ನಾನು ಬಡ್ತಿ ಮೀಸಲಾತಿ ವಿಧೇಯಕ ವಿರೋಧಿಸಿದೆ ಎಂದು ಬಿಂಬಿಸಲಾಗುತ್ತಿದ್ದು ಅದು ಶುದ್ಧ ಸುಳ್ಳು. ರಾಜ್ಯ ಸರ್ಕಾರ ಸೂಕ್ತ ಕಾಯ್ದೆ ರೂಪಿಸುವಲ್ಲಿ ವಿಫ‌ಲವಾಗಿದೆ. ನಿಮ್ಮ ಆರ್ಶೀವಾದದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದ್ದು ನಮ್ಮ ಸರ್ಕಾರ ಬಂದ ಮೊದಲ ಅಧಿವೇಶನದಲ್ಲೇ ಸಮರ್ಪಕ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ಉದ್ಯೋಗ ಅಷ್ಟೇ ಅಲ್ಲದೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆದರೆ,  ಈ ಸಂಬಂಧ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ರಾಜ್ಯ ಸರ್ಕಾರ ಪ್ರಸ್ತಾವನೆ ಸಿದ್ಧ ಮಾಡಿ ಕೇಂದ್ರಕ್ಕೆ ಕಳುಹಿಸಬೇಕಿದೆ ಎಂದರು.

ದಲಿತ ಸಮುದಾಯಕ್ಕೆ ಎಲ್ಲ ರೀತಿಯ ಅವಕಾಶಗಳು ಸಿಗಬೇಕು ಎಂದು ಪ್ರತಿಪಾದಿಸುವವನು ನಾನು. ಎಚ್‌.ಡಿ.
ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದಾಗ ದಲಿತ ಸಮುದಾಯದ ಅಭಿವೃದ್ಧಿ ಹಾಗೂ ಮೀಸಲಾತಿ ಸಂಬಂಧ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ದಲಿತರ ಮನೆಯಲ್ಲಿ ವಾಸ್ತವ್ಯ ಸೇರಿ ದಲಿತ ಸಮುದಾಯದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಅತಂತ್ರ ಫ‌ಲಿತಾಂಶ ಬರುತ್ತದೆ.  ಜೆಡಿಎಸ್‌ ಕಿಂಗ್‌ ಮೇಕರ್‌ ಆಗುತ್ತದೆ. ಯಾವುದಾದರೂ ರಾಷ್ಟ್ರೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾಗತಾರೆ ಎಂದೆಲ್ಲಾ ಕೆಲವರು ಭವಿಷ್ಯ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ನಾನು ಅದನ್ನು ನಂಬುವುದಿಲ್ಲ. ನೀವೆಲ್ಲಾ ಸಹಕಾರ ನೀಡಿದರೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ನಿಮ್ಮೆಲ್ಲರ ಆಶಯ ಈಡೇರಿಸುವ ವಾಗಾœನ ನೀಡುತ್ತೇನೆ.

ಮುಂದಿನ ಚುನಾವಣೆಯಲ್ಲಿ ಒಂದು ಅವಕಾಶ ಜೆಡಿಎಸ್‌ಗೆ ನೀಡಿ. ದಲಿತ ಸಮುದಾಯ ಯಾರ ಮುಂದೆಯೂ ತಮ್ಮ ಹಕ್ಕು ಮೀಸಲಾತಿಗಾಗಿ ಕೇಳುವ ಸ್ಥಿತಿ ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಜೆಡಿಎಸ್‌ ಬೆಂಬಲಿಸುವಂತೆ ಮನವಿ ಮಾಡಿದರು.

ಸದಾಶಿವ ಆಯೋಗದ ವರದಿ ಬಗ್ಗೆ ಪರ ವಿರೋಧ ಹೋರಾಟಗಳು ನಡೆಯುತ್ತಿವೆ. ಸರ್ಕಾರ ಎಲ್ಲವನ್ನೂ ನೋಡಿಕೊಂಡು ಮೌನ ವಹಿಸಿರುವುದು ಸರಿಯಲ್ಲ. ಎರಡೂ ಕಡೆಯವರನ್ನು ಕರೆದು ಚರ್ಚಿಸಿ ಒಮ್ಮತ ಮೂಡಿಸುವ ಕೆಲಸ ಮಾಡಬೇಕು ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾನು ರಾಜಕೀಯ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದೆ.  ಗ್ರಾಮವಾಸ್ತವ್ಯ, ಜನಸಂಪರ್ಕ ಸಭೆಗಳಲ್ಲಿ ಜನರ ಸಮಸ್ಯೆ ಆಲಿಸಿ ಕಾರ್ಯಕ್ರಮ ನೀಡುವ ಮೂಲಕ ಉತ್ತಮ ಆಡಳಿತ ನೀಡಿದೆ. ಮುಂದೆ ಜೆಡಿಎಸ್‌ ಅಧಿಕಾರಕ್ಕೆ ಬಂದರೂ ಜನತೆ ಹಾಗೂ ಸಂಘಟನೆಗಳಿಗೆ ಸ್ಪಂದಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇನೆ. ಜಿಲ್ಲಾ ಉಸ್ತವಾರಿ ಸಚಿವ ಹಾಗೂ ಕಾರ್ಯದರ್ಶಿ ತಿಂಗಳಲ್ಲಿ ಒಂದು ದಿನ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಬೇಕು ಎಂದು ನಿರ್ದೇಶನ ನೀಡುತ್ತೇನೆ ಎಂದರು.

ಎನ್‌.ಮೂರ್ತಿ, ಜಿಗಣಿ ಶಂಕರ್‌, ವೆಂಕಟಸ್ವಾಮಿ, ಶಿವಣ್ಣ ಮೈಸೂರು, ಕೆ.ಪಿ.ರಾಜರತ್ನ ಚಿಕ್ಕಮಗಳೂರು,ಪಿ.ಮೂರ್ತಿ, ವಿಜಯಕುಮಾರ್‌, ಯಡತೊರೆ ಮಹದೇವ ಸೇರಿ 50 ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಸಂವಾದದಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಹಲ್ಕೋಡು ಹನುಮಂತಪ್ಪ, ಮಾಜಿ ಶಾಸಕ ಅನ್ನದಾನಿ ಉಸ್ತುವಾರಿ ವಹಿಸಿದ್ದರು.

ಹಣಕ್ಕಾಗಿ ರಾಜಕೀಯ ಮಾಡಲ್ಲ
ಜೆಡಿಎಸ್‌ನಲ್ಲಿ ಹಣ ಇದ್ದವರಿಗೆ ಮಾತ್ರ ಟಿಕೆಟ್‌ ಎಂದು ಹೇಳಲಾಗುತ್ತಲ್ಲಾ ಎಂದು  ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಮುಜುಗರಕ್ಕೊಳಗಾದ ಕುಮಾರಸ್ವಾಮಿ, ಆ ರೀತಿಯಾಗಿ ಬಿಂಬಿಸಿ ಅಪಪ್ರಚಾರ ಮಾಡಲಾಗುತ್ತದೆ. ಆದರೆ, ನಾವು ಯಾವತ್ತೂ ಹಣಕ್ಕಾಗಿ ರಾಜಕೀಯ ಮಾಡಿದವರಲ್ಲ, ಮಾಡುವುದೂ ಇಲ್ಲ. ಜನರೊಂದಿಗೆ ಒಡನಾಟ ಹೊಂದಿರುವ ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದೇವೆ. ಹಣ ಇಲ್ಲದವರಿಗೂ ಟಿಕೆಟ್‌ ಕೊಟ್ಟಿದ್ದೇವೆ. ಹಿಂದೆ ಮಳವಳ್ಳಿಯಲ್ಲಿ  ಕ್ಷೇತ್ರದಲ್ಲಿ ಅನ್ನದಾನಿ  ಬಳಿ ಹಣ ಇಲ್ಲ ಟಿಕೆಟ್‌ ಕೊಡಬೇಡಿ ಎಂದು ಕೆಲವರು ಹೇಳಿದ್ದರು. ಆದರೆ, ನಾನೇ ಹಠ ಹಿಡಿದು ಟಿಕೆಟ್‌ ಕೊಟ್ಟೆ. ಅವರು ಸೋತರು, ಆದರೆ, ಪಕ್ಷ ಸಂಘಟನೆಯಲ್ಲಿ ಮುಂದುವರಿದಿದ್ದಾರೆ. ಹೀಗಾಗಿ, ನಮಗೆ ಹಣ ಮುಖ್ಯವಲ್ಲವೇ ಅಲ್ಲ, ಉತ್ತಮ ವ್ಯಕ್ತಿ ಮುಖ್ಯ, ಜೆಡಿಎಸ್‌ ಆರ್ಥಿಕವಾಗಿ ಶಕ್ತಿಯುತವಾಗಿಲ್ಲ ನಿಜ. ಆದರೆ, ಚುನಾವಣೆಗೆ ಕನಿಷ್ಠ ವೆಚ್ಚಕ್ಕಾದರೂ ಹಣ ಬೇಕು. ಹೀಗಾಗಿ, ಬೇರೆಯವರಿಂದ ನೆರವು ಪಡೆಯುತ್ತೇವೆ ಎಂದು ಹೇಳಿದರು.

ಸಂವಿಧಾನ ಸರಿಯಿಲ್ಲ, ಅದನ್ನು ಬದಲಾಯಿಸಬೇಕು ಎಂದು ಹೇಳುವವರು  ಅವಿವೇಕಿಗಳು. ವಿಶ್ವಕ್ಕೆ ಮಾದರಿಯಾಗುವ ಸಂವಿಧಾನವನ್ನು ಅಂಬೇಡ್ಕರ್‌ ನೀಡಿದ್ದಾರೆ. ಎಷ್ಟೇ ತಲೆಮಾರು ಬಂದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.  ಈ ಬಗ್ಗೆ ಮಾತನಾಡಿದಷ್ಟೂ ಅನಗತ್ಯ ಚರ್ಚೆ ಮುಂದುವರಿಯುತ್ತದೆ, ಹೀಗಾಗಿ, ಅಂತಹ ಹೇಳಿಕೆ ನಿರ್ಲಕ್ಷ್ಯ ಮಾಡುವುದೇ ಸೂಕ್ತ.
  – ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next