ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಶನಿವಾರ ಪಿಪಿಇ ಕಿಟ್ ಧರಿಸಿಕೊಂಡು ಖುದ್ದಾಗಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಬಿಮ್ಸ್ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನಾನು ಆಸ್ಪತ್ರೆಗೆ ಬಂದಿದ್ದೇನೋ ಅಥವಾ ಜಾತ್ರೆಗೆ ಬಂದಿದ್ದೇನೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲ ವಾರ್ಡ್ ಗಳನ್ನು ಖುದ್ದಾಗಿ ಪರಿಶೀಲಿಸಿ ಅವ್ಯವಸ್ಥೆ ಬಗ್ಗೆ ಬಿಮ್ಸ್ ಅಧಿಕಾರಿಗಳ ವಿರುದ್ಧ ಗರಂ ಆದರು. ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲದಿರುವುದಕ್ಕೆ ಕೇಳಿದ ಪ್ರಶ್ನೆಗೆ ಅ ಧಿಕಾರಿಗಳು ನಿರುತ್ತರರಾದರು.
ಆಸ್ಪತ್ರೆಯ ಐಸಿಯು ವಿಭಾಗವಂತೂ ಅಸ್ವತ್ಛತೆಯಿಂದ ಕೂಡಿದೆ. ಇಲ್ಲಿ ಹೇಳುವವರೂ ಇಲ್ಲ, ಕೇಳೂವವರೂ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಐಸಿಯು, ಕೋವಿಡ್ ವಾರ್ಡ್ ಗಳನ್ನು ಪರಿಶೀಲಿಸಿದ್ದೇನೆ. ಕೊರೊನಾ ಸೋಂಕಿತರನ್ನು ಮಾತನಾಡಿಸಿದ್ದೇನೆ. ಬೇಗ ಗುಣಮುಖರಾಗುವಂತೆ ಧೈರ್ಯ ತುಂಬಿದ್ದೇನೆ. ಕೂಡಲೇ ವ್ಯವಸ್ಥೆಯನ್ನು ಸರಿಪಿಡಿಸಿ ಶುಚಿತ್ವ ಕಾಪಾಡಿಕೊಂಡು ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಲಾಗಿದೆ. ಬಿಮ್ಸ್ ಆಡಳಿತ ಮಂಡಳಿಯ ಚರ್ಮ ದಪ್ಪವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸದ್ಯದಲ್ಲಿಯೇ ಬೆಳಗಾವಿಗೆ ಆಗಮಿಸಲಿದ್ದಾರೆ. ಆ ವೇಳೆ ಬಿಮ್ಸ್‌ನ ಅವ್ಯವಸ್ಥೆ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ. ಶೀಘ್ರದಲ್ಲಿಯೇ ಇಲ್ಲಿಯ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದರು.
ಆಸ್ಪತ್ರೆಗೆ ಬಂದಿದ್ದೇನೋ ಅಥವಾ ನಾನು ಜಾತ್ರೆಗೆ ಬಂದಿದ್ದೇನೋ ಎಂಬಂತೆ ಭಾಸವಾಗಿದೆ. ಬಿಮ್ಸ್ ನಲ್ಲಿ ಸ್ವತ್ಛತೆ ಸರಿಯಾಗಿಲ್ಲ. ಐಸಿಯು ವಿಭಾಗದಲ್ಲಿ ವೆಂಟಿಲೇಟರ್‌ಗಳ ಮೇಲೆ ಜನರು ಬಟ್ಟೆ ಒಣಗಲು ಹಾಕಿದ್ದಾರೆ. ಬಟ್ಟೆ ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಯೇ ಇಟ್ಟಿದ್ದಾರೆ. ಇದನ್ನು ಸರಿ ಮಾಡುವಂತೆ ಅಧಿ ಕಾರಿಗಳಿಗೆ ತಾಕೀತು ಮಾಡಲಾಗಿದೆ. ಇಲ್ಲಿರುವ ಐಸಿಯು ವಿಭಾಗ ಐಸಿಯು ತರಹ ಇಲ್ಲ. ಅದು ಬೇರೆನೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮನ್ವಯತೆ ಕೊರತೆ: ಬಿಮ್ಸ್‌ನ ಪ್ರತಿ ವಾರ್ಡ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಬೇರೆ ಬೇರೆ ಪಾಳಿ (ಶಿಫ್ಟ್)ಯಲ್ಲಿ ವೈದ್ಯರು ಕೆಲಸ ಮಾಡುವಂತೆ ಹೇಳಲಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತದ ಸಮನ್ವಯತೆ ಇಲ್ಲ. ಇದನ್ನು ಸರಿಪಡಿಸಬೇಕಾಗಿದೆ. ಅ ಧಿಕಾರಿಗಳು ತಮ್ಮ ಲೋಕದಲ್ಲಿ ತೇಲಾಡುತ್ತಿದ್ದಾರೆ. ಆ ಲೋಕದಿಂದ ಹೊರ ತರಲಾಗುವುದು. ಯಾರಿಗೆ ಏನು ಮಾಡಬೇಕು ಎಂಬುದನ್ನು ಸರಿ ಮಾಡುತ್ತೇನೆ. ಬಿಮ್ಸ್ ವ್ಯವಸ್ಥೆ ಸರಿ ಮಾಡಿದರೆ ಜನರು ಖಾಸಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದರು.
ಜಿಲ್ಲೆಗೆ ಪ್ರಧಾನ ಮಂತ್ರಿ ಕೇರ್ ಅಡಿ ವೆಂಟಿಲೆಟರ್ ಬಂದಿವೆ. ಜಿಲ್ಲಾ ಮಟ್ಟದ ಅ ಧಿಕಾರಿಗಳು ಮಲಗಿದ್ದಾರೆ. ಅನೇಕ ತಾಲೂಕುಗಳಲ್ಲಿ ವೆಂಟಿಲೆಟರ್ ಓಪನ್ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.