ಬೆಂಗಳೂರು : ಸಾರಿಗೆ ನೌಕರರು ಸರ್ಕಾರದ ಮುಂದೆ ಹತ್ತು ಬೇಡಿಕೆಗಳನ್ನು ಇಟ್ಟಿದ್ದು, ಸರ್ಕಾರಿ ನೌಕರರಂತೆ ಪರಿಗಣಿಸಬೇಕೆಂಬ ಬೇಡಿಕೆಯನ್ನು ಬಿಟ್ಟು ಉಳಿದ ಒಂಬತ್ತು ಬೇಡಿಕೆಗಳನ್ನೂ ಈಡೇರಿಸುವ ಪ್ರಯತ್ನ ನಡೆದಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಸಿಎಂ ಸಭೆಯ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, ಈಗಾಗಲೇ 9 ಬೇಡಿಕೆ ಈಡೇರಿಸಿದ್ದೇವೆ. ಅಂತರ್ ನಿಗಮ ವರ್ಗಾವಣೆ, ಟಿಎ ಹೆಚ್ಚಳದ ಬೇಡಿಕೆಯನ್ನೂ ಈಡೇರಿಸಿದ್ದೇವೆ. ಅಲ್ಲದೆ ನೌಕರರ ಬೇಡಿಕೆಯಾದ ಆರನೇ ನೇ ಪೇ ಕಮೀಷನ್ ವಿಚಾರದ ಬಗ್ಗೆ ಇಂದು ಚರ್ಚೆಯಾಗಿದೆ. ಆರ್ಥಿಕ ಇಲಾಖೆ ಇದರ ಬಗ್ಗೆ ಎರಡು ದಿನದಲ್ಲಿ ಪರಿಶೀಲನೆ ನಡೆಸಲಿದೆ ಎಂದರು.
ಇದೇ ವೇಳೆ ಮಾತನಾಡಿದ ಸವದಿ, ಸಾರಿಗೆ ನೌಕರರಿಗೆ ನಾನು ವಿನಂತಿ ಮಾಡಿಕೊಳ್ತೇನೆ. ಮಧ್ಯಮ ವರ್ಗ, ಬಡ ವರ್ಗದವರಿಗೆ ಅನಾನುಕೂಲ ಮಾಡಬೇಡಿ. ಪ್ರತಿಭಟನೆ ಮಾಡಿದರೆ ಅನಾನುಕೂಲವಾಗಲಿದೆ. ನಾವು ಕೊಟ್ಟ ಭರವಸೆಯನ್ನ ಈಡೇರಿಸುತ್ತೇವೆ. ಸಾರಿಗೆಯಿಂದ ಬರುವ ಆದಾಯ ಇಂಧನ ಮತ್ತು ವೇತನಕ್ಕೆ ಸಾಲುತ್ತಿಲ್ಲ. ಇಂತ ಕಷ್ಟಕಾಲದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಹಣಕಾಸು ವೃದ್ಧಿಯಾಗುತ್ತಿದ್ದಂತೆ ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ಹಿಂದಿನ ಅರಿಯರ್ಸ್ ಕೂಡ ನೀಡ್ತೇವೆ. ದಿಡೀರ್ ಅಂತ ಪ್ರತಿಭಟನೆಗೆ ಮುಂದಾಗಬೇಡಿ. ಒಂದು ವೇಳೆ ಪ್ರತಿಭಟನೆ ಮಾಡಿದರೆ ಪರ್ಯಾಯ ವ್ಯವಸ್ಥೆಯಾಗಿ 1200 ಖಾಸಗಿ ಬಸ್ ಬಳಸಿಕೊಳ್ತೇವೆ ಎಂದರು.
ಸಾರಿಗೆ ನೌಕರರು ಪ್ರತಿಭಟನೆ ಮಾಡಿದರೆ ಖಾಸಗಿಯವರಿಗೆ ಉಚಿತ ಪರ್ಮಿಟ್ ಕೊಡ್ತೇವೆ. ಪ್ರಸ್ತುತ ಖಾಸಗಿ ಬಸ್ ನವರು ಪರ್ಮಿಟ್ ಸರೆಂಡರ್ ಮಾಡಿದ್ದಾರೆ. ಬಜೆಟ್ ನಲ್ಲೂ ಇದರ ಬಗ್ಗೆ ಘೋಷಣೆಯಾಗಿದೆ ಎಂದರು.