ಕೊಳ್ಳೇಗಾಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ವಿವಿಧ ಕೋಮುಗಳ ಮತ ಬ್ಯಾಂಕ್ ಮಾಡಿಕೊಳ್ಳುವ ಸಲುವಾಗಿ ಜಾತಿಗೊಂದು ಉಪ ಮುಖ್ಯಮಂತ್ರಿ ನೀಡಲಿದ್ದಾರೆಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ವ್ಯಂಗವಾಡಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸೋಮವಾರ ಮಾಜಿ ಶಾಸಕ ಎಸ್.ಜಯಣ್ಣ ಅವರ 67ನೇ ಹುಟ್ಟುಹಬ್ಬದ ಅಂಗವಾಗಿ ಸನ್ಮಾನಿಸಿ ಗೌರವಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಾತಿಗೊಂದು ಉಪ ಮುಖ್ಯಮಂತ್ರಿ ನೀಡುವುದು ದೂರವಿಲ್ಲ ಎಂದರು.
ಎಲ್ಲರಿಗೂ ಉಪ ಮುಖ್ಯಮಂತ್ರಿ: ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡದೆ ಕೇವಲ ಮಂತ್ರಿ ಮಂಡಲ ರಚನೆ ಮಾಡಿ 5 ವರ್ಷಗಳ ಕಾಲ ಸರ್ಕಾರ ಯಶಸ್ವಿಗೊಳಿಸಿದರು. ಅವರ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಮಂತ್ರಿ ಮಂಡಲದಲ್ಲಿ ಹಿರಿಯ ರಾಜಕಾರಣಿ ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದರು. ಈ ಉಪ ಮುಖ್ಯಮಂತ್ರಿ ಹುದ್ದೆಯನ್ನು ಹಿರಿಯ ರಾಜಕಾರಣಿಗಳಿಗೆ ನೀಡುತ್ತಾರೆ. ಆದರೆ ಮುಖ್ಯಮಂತ್ರಿ ಬಿಎಸ್‌ವೈ ಅವರು ಮಂತ್ರಿಮಂಡಲದಲ್ಲಿರುವ ಎಲ್ಲರಿಗೂ ಉಪ ಮುಖ್ಯಮಂತ್ರಿ ನೀಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸಂಸದರ ಅಸಮಾಧಾನ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಜ್ಯ ಮಂತ್ರಿ ಮಂಡಲ ರಚನೆಯ ಸಂದರ್ಭದಲ್ಲಿ ಮೂವರು ಮುಖ್ಯಮಂತ್ರಿ ರಚನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದೇ ಸಾಕ್ಷಿಯಾಗಿದ್ದು, ರಾಜ್ಯ ಬಿಜೆಪಿ ಸರ್ಕಾರ ಇನ್ನು ಟೇಕಾಪ್ ಆಗಿಲ್ಲ ಎಂದರು.
ರಾಜಕೀಯ ದ್ವೇಷದಿಂದ ಡಿಕೆಶಿ ಬಂಧನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಮಾಡಿರುವುದು 100ಕ್ಕೆ ನೂರು ರಾಜಕೀಯ ಪ್ರೇರಿತ ಎಂದು ಹೇಳಿದ ಅವರು ಗುಜರಾತ್ ರಾಜ್ಯದ ಶಾಸಕರ ರಕ್ಷಣೆ ಮಾಡಿದ ಪ್ರತಿಫಲವಾಗಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹಿಸಲಾಗದೆ ಈ ರೀತಿಯ ಇ.ಡಿ.ಕುಣಿಕೆಯನ್ನು ಡಿ.ಕೆ.ಶಿವಕುಮಾರ್‌ರವರಿಗೆ ಹಾಕಿದ್ದಾರೆ ಎಂದರು.
ಎಲ್ಲಾ ಹಣಕ್ಕೂ ತೆರಿಗೆ ಪಾವತಿ: ಕಳೆದ 30 ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರು ಗಣಿಗಾರಿಕೆಯಿಂದ ಸಂಪಾದಿಸಿದ ಹಣಕ್ಕೆ ಎಲ್ಲಾ ತೆರಿಗೆಯನ್ನು ಪಾವತಿಸಿದ್ದಾರೆ. ಆದರೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಮುಖಂಡರನ್ನು ದಮನ ಮಾಡುವ ಪ್ರಯತ್ನಕ್ಕೆ ಇ.ಡಿ.ಯನ್ನು ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ವರ್ಗಾವಣೆ ದಂಧೆ: ರಾಜ್ಯದಲ್ಲಿ ಪ್ರವಾಹದಿಂದಾಗಿ ಹಲವಾರು ಜಿಲ್ಲೆಗಳಲ್ಲಿ ನೆರೆ ಉಂಟಾಗಿದ್ದು, ನೊಂದವರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲರಾಗಿದ್ದು, ವರ್ಗಾವಣೆಯ ದಂಧೆಯಲ್ಲಿ ಮುಳುಗಿದ್ದಾರೆಂದು ದೂರಿದರು.
ಪ್ರಧಾನಿ ಭೇಟಿ: ವಿಕ್ರಮ ಚಂದ್ರಯಾನ ನೋಡಲು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ವೀಕ್ಷಣೆ ಮಾಡಿದ್ದರು. ಆದರೆ ರಾಜ್ಯದ 15 ಜಿಲ್ಲೆಗಳಲ್ಲಿ ನೆರೆ ಹಾವಳಿ ವೀಕ್ಷಣೆ ಮಾಡಲಿಲ್ಲ ಎಂದು ದೂರಿದರು.