Advertisement

ಗೌರಿಗದ್ದೆ ಆಶ್ರಮಕೆ ಡಿಸಿಎಂ ಕಾರಜೋಳ ಭೇಟಿ

04:24 PM Feb 28, 2021 | Team Udayavani |

ಕೊಪ್ಪ: ಸಂಕಷ್ಟ ಕಾಲದಲ್ಲೂ ಸಹ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಶನಿವಾರ ತಾಲೂಕಿನ ಕಾಳನಾಯಕನ ಕಟ್ಟೆಯಿಂದ ಗೌರಿಗದ್ದೆ ದತ್ತಾಶ್ರಮಕ್ಕೆ ಹೋಗುವ ರಸ್ತೆಯಲ್ಲಿ ರೂ.75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು. ಯಡಿಯೂರಪ್ಪ ಅವರು 79 ನೇ ವಯಸ್ಸಿನಲ್ಲೂ ಕೂಡ 29 ವರ್ಷದ ಹುಡುಗನ ಹಾಗೆ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಅವರು ಆರೋಗ್ಯವಂತರಾಗಿ ನೂರು ಕಾಲ ಬಾಳಲಿ ಮತ್ತು ನಾಡಿಗೆ ಉತ್ತಮ ಆಡಳಿತ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಕಾಳನಾಯಕನ ಕಟ್ಟೆಯಿಂದ ಗೌರಿಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ  ನೆರವೇರಿಸಲಾಗಿದೆ. ಕಾಳನಾಯಕನ ಕಟ್ಟೆ, ಗೌರಿಗದ್ದೆ, ಮೇಲ್‌ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ನೀಡಲಾಗಿದ್ದು, ಕಾಮಗಾರಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅನಾರೋಗ್ಯದಿಂದ ತಮ್ಮ ಪುತ್ರ ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಗೌರಿಗದ್ದೆ ವಿನಯ್‌ ಗುರೂಜಿ, ಧಾರವಾಡದ ಪಾಟೀಲ್‌ ಗುರೂಜಿ, ಸುತ್ತೂರು ಮಠದ ಶ್ರೀಗಳು, ಶ್ರೀಶೈಲದ ಜಗದ್ಗುರುಗಳು, ಉಡುಪಿ ಪೇಜಾವರ ಶ್ರೀಗಳು, ಮಂತ್ರಾಲಯ ಶ್ರೀಗಳು, ಸಿರಿಗೆರೆ ಮಹಾಸ್ವಾಮೀಜಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಧೈರ್ಯ ತುಂಬಿದ್ದರು. ಅವರಿಗೆ ಕೃತಜ್ಞತೆ ತಿಳಿಸಲು ಇಂದು ಭೇಟಿ ನೀಡುತ್ತಿದ್ದೇನೆ ಎಂದರು.

ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದ ವಿನಯ್‌ ಗುರೂಜಿ ಮಾತನಾಡಿ, ಆಶ್ರಮದಲ್ಲಿ 116 ಮೂಲಿಕೆಗಳಿಂದ ಮಹಾಮೃತ್ಯುಂಜಯ ಯಾಗ ನಡೆಯುತ್ತಿದೆ. ಧರ್ಮಿಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ. ಅವರ ಆಯುಷ್ಯ ವೃದ್ಧಿಗಾಗಿ ಇಂದು ಪ್ರಾರ್ಥಿಸಿದ್ದೇವೆ ಎಂದರು.

Advertisement

ಕಾರಜೋಳ ಅವರ ಪುತ್ರ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯ ವೃದ್ಧಿಗಾಗಿ ದತ್ತಾತ್ರೇಯ ಆಶ್ರಮದಲ್ಲಿ ಪ್ರಾರ್ಥಿಸಲಾಗಿತ್ತು. 16 ದಿನ ಅವರ ಹೆಸರಲ್ಲಿ 48 ಜನ ನೀರಲ್ಲಿ ಕುಳಿತು ಜಪಾದಿಗಳನ್ನು ಮಾಡಿದ್ದರಿಂದ ವೇದದ ತಾಕತ್ತು ಏನು ಎಂಬುದನ್ನು ಪ್ರಪಂಚಕ್ಕೆ ಭಗವಂತ ತೋರಿಸಿದ್ದಾನೆ. 48ನೇ ದಿನವಾದ ಇಂದು ಅಂತಿಮವಾಗಿ ಮೃತ್ಯುಂಜಯ ಯಾಗ ನಡೆಯುತ್ತಿದೆ ಎಂದರು.

ಗೌರಿಗದ್ದೆ ದತ್ತಾಶ್ರಮಕ್ಕೆ ತೆರಳಿದ ಕಾರಜೋಳ ಅವರು ಮೃತ್ಯುಂಜಯ ಯಾಗದ ಪೂರ್ಣಾಹುತಿ ಪೂಜೆಯಲ್ಲಿ ಭಾಗಿಯಾದರು. ಶಾಸಕ ಟಿ.ಡಿ. ರಾಜೇಗೌಡ, ಜಿಪಂ ಸದಸ್ಯ ಎಸ್‌.ಎನ್‌. ರಾಮಸ್ವಾಮಿ, ತಾಪಂ ಸದಸ್ಯ ಪ್ರವೀಣ್‌ ಹಣಗಲ್‌, ತಹಶೀಲ್ದಾರ್‌ ಎಚ್‌.ಎಸ್‌. ಪರಮೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next