Advertisement

ಆಲಮಟ್ಟಿ: ಬೇಸಿಗೆಯ ಬಿಸಿಲು ತಾರಕಕ್ಕೇರುತ್ತಿರುವ ಮಧ್ಯದಲ್ಲಿ ಜನರ ದಾಹ ನೀಗಿಸಲು ಕೃಷ್ಣಾಭಾಗ್ಯಜಲ ನಿಗಮದ ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಶಾಸ್ತ್ರಿ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ವಿಜಯಪುರ ಜಿಲ್ಲೆಯೆಂದರೆ ಸಾಕು ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿಗಾಗಿ ಜನಜಾನುವಾರುಗಳು ಕಿ.ಮೀ.ಗಟ್ಟಲೇ ಅಲೆದಾಡಬೇಕು ಎನ್ನುವುದು ರೂಢಿಯಲ್ಲಿನ ಮಾತು. ಇಷ್ಟೇ ಅಲ್ಲದೇ ಮಳೆಗಾಲದಲ್ಲಿ ಮಳೆಯಾದರೆ ಮಳೆ ಇಲ್ಲದಿದ್ದರೆ ಹೊಟ್ಟೆ ತುಂಬಿಸಿಕೊಳ್ಳಲು ಗುಳೆ ಎನ್ನುವ ಸ್ಥಿತಿಯಿತ್ತು. ಇದೆಲ್ಲದರ ನಿರ್ನಾಮಕ್ಕಾಗಿ ಆಲಮಟ್ಟಿಯಲ್ಲಿ 1964 ಮೇ 22ರಂದು ಆಗಿನ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು.

ಜಲಾಶಯ ನಿರ್ಮಾಣಕ್ಕೆ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ದಿ|ಎಸ್‌.ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನು ಜಲಾಶಯ ಲೋಕಾರ್ಪಣೆಯ ಸಮಾರಂಭವನ್ನು ಖ್ಯಾತ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳೂ ಆಗಿದ್ದ ಡಾ| ಎಪಿಜೆ ಅಬ್ದುಲ ಕಲಾಂ ಅವರು 2006ರಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್‌ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿಯವರು ವಹಿಸಿದ್ದರು. ಇದಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಈಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದರು ಹಾಗೂ ಜಲ ಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಸಂಪುಟದ ಸಚಿವರುಗಳು, ಶಾಸಕರು ಸೇರಿ ಈ ಭಾಗದ ಎಲ್ಲ ಜನಪ್ರತಿನಿ ಧಿಗಳು ಮತ್ತು ರೈತರು ಸಾಕ್ಷಿಯಾಗಿದ್ದರು.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಕಟ್ಟಡ ಪೂರ್ಣಗೊಂಡು ಕೆಲ ಕಾಲುವೆಗಳಲ್ಲಿ ನೀರು ಹರಿಯಬೇಕಾದರೆ ಅರ್ಧ ಶತಮಾನವೇ ಬೇಕಾಯಿತು. ಇಷ್ಟಾದರೂ ಕೂಡ ಜಲಾಶಯ ನಿರ್ಮಾಣಗೊಂಡಿರುವ ಜಿಲ್ಲೆಗೆ ಸಮಗ್ರವಾಗಿ ನೀರಾವರಿಯಾಗದಿರುವುದು ಬೇರೆ ಮಾತು. 123.081 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ 519.60 ಮೀ. ಗರಿಷ್ಠ ಎತ್ತರದ ಶಾಸ್ತ್ರಿ ಜಲಾಶಯದಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಂವಹನ ಕೊರತೆಯಿಂದ 2017 ಮಾರ್ಚ್‌ 27ರಂದು ಜಲಾಶಯದಲ್ಲಿ 505.140 ಮೀ. ಎತ್ತರವಾಗಿ 13.037 ಟಿಎಂಸಿ ಅಡು ಕನಿಷ್ಠ ನೀರು ಸಂಗ್ರಹವಾಗಿದ್ದರಿಂದ ಜಲಚರಗಳು ಸಾವಿಗೀಡಾಗುವಂತಾಗಿತ್ತು.

ಬೃಹತ್‌ ಜಲಾಶಯವಿರುವ ಜಿಲ್ಲೆಯ ಜನರು ಜೂನ್‌-ಜುಲೈವರೆಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗುತ್ತಿತ್ತು. ಇದರಿಂದ ಪಾಠ ಕಲಿತ ಕೃಷ್ಣಾಭಾಗ್ಯಜಲ ನಿಗಮದ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಅವಳಿ ಜಲಾಶಯಗಳಾಗಿರುವ ಆಲಮಟ್ಟಿ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳಲ್ಲಿ ನೀರು ಸಂಗ್ರಹ ಮಾಡಿಕೊಳ್ಳುವಲ್ಲಿ ಜಾಣ್ಮೆ ತೋರುತ್ತಿದ್ದಾರೆ.

Advertisement

ಶಾಸ್ತ್ರಿ ಜಲಾಶಯದಲ್ಲಿ ಬುಧವಾರ 512.45 ಮೀ.ಎತ್ತರವಾಗಿ 43.775 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ 17.620 ಟಿಎಂಸಿ ಅಡಿ ಜಲಚರಗಳಿಗಾಗಿ ಮೀಸಲಿದ್ದು ಇನ್ನುಳಿದ 26.155 ಟಿಎಂಸಿ ಅಡಿ ನೀರಿನಲ್ಲಿ ಭಾಷ್ಪೀಭವನ, ವಿವಿಧ ಗ್ರಾಮಗಳ ಕುಡಿಯುವ ನೀರು ಹಾಗೂ ನಗರ ಪ್ರದೇಶಗಳ ಜನತೆಗೆ ಕುಡಿಯುವ ನೀರನ್ನು ಸಂಗ್ರಹಿಸಿಕೊಂಡು ಕೃಷಿಗಾಗಿ ಮಾರ್ಚ್‌-31ರವರೆಗೂ ಕಾಲುವೆಗಳ ಮೂಲಕ ನೀರು ಹರಿಸಲು ತೀರ್ಮಾನಿಸಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

ಶಂಕರ ಜಲ್ಲಿ

 

Advertisement

Udayavani is now on Telegram. Click here to join our channel and stay updated with the latest news.

Next