Advertisement

ಬೇರೊಬ್ಬರಿಂದ ನೀತಿಪಾಠ ಬೇಕಿಲ್ಲ ಡಿಸಿಎಂಗೆ ರೇಣುಕಾಚಾರ್ಯ ತಿರುಗೇಟು

11:10 PM Dec 18, 2019 | Team Udayavani |

ಬೆಂಗಳೂರು: “ನಾನು ಬಿಜೆಪಿ ತತ್ವ-ಸಿದ್ಧಾಂತ ಒಪ್ಪಿ 90ರ ದಶಕದಿಂದ ಕೆಲಸ ಮಾಡುತ್ತಿದ್ದೇನೆ. 3 ಬಾರಿ ಶಾಸಕನೂ ಆಗಿದ್ದೇನೆ. ಆದರೆ, ಬೇರೊಬ್ಬರಿಂದ ನೀತಿಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉಪಮುಖ್ಯ ಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರಿಗೆ ತಿರುಗೇಟು ನೀಡಿದರು.

Advertisement

“ಪಕ್ಷದ ನಿರ್ಧಾರದ ಬಗ್ಗೆ ಹಾದಿ ಬೀದಿ ಯಲ್ಲಿ ಮಾತನಾಡುವುದಲ್ಲ. ಪಕ್ಷದ ವೇದಿಕೆ ಗಳಲ್ಲಿ ಮಾತನಾಡುವುದು ಸೂಕ್ತ’ ಎಂದು ಡಿಸಿ ಎಂ ಅಶ್ವತ್ಥ ನಾರಾಯಣ ಹೇಳಿದ್ದರು. ಇದಕ್ಕೆ ನಗರದ ಅಶೋಕ ಹೋಟೆಲ್‌ನಲ್ಲಿ ಪ್ರತಿಕ್ರಿಯಿಸಿ, “ಹಾದಿ-ಬೀದಿಯಲ್ಲಿ ನಾನು ಹೇಳಿಕೆ ಕೊಟ್ಟಿಲ್ಲ. ಸೂಕ್ತ ವೇದಿಕೆಗಳಲ್ಲಿಯೇ ಮಾತನಾಡಿದ್ದೇನೆ. ನನ್ನ ಅಭಿಪ್ರಾಯಕ್ಕೆ ಪಕ್ಷದ ಉಳಿದ ಶಾಸಕರು, ಮುಖಂಡರು ನಂತರದಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಬೇರೊಬ್ಬರು ನೀತಿಪಾಠ ಹೇಳುವ ಅಗತ್ಯ ಇಲ್ಲ’ ಎಂದು ಹೆಸರು ಪ್ರಸ್ತಾಪಿಸದೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದರು. ಮೂವರು ಉಪ ಮುಖ್ಯಮಂತ್ರಿಗಳ ಅವಶ್ಯಕತೆ ಇಲ್ಲ ಎಂಬುದು ಜನರ ಅಭಿಪ್ರಾಯ ಅಷ್ಟೇ. ಅದನ್ನು ಜನರ ಪ್ರತಿನಿಧಿಯಾಗಿ ನಾನು ಹೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಥವಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಥವಾ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರಶ್ನಿಸಿಲ್ಲ.

ಅಷ್ಟಕ್ಕೂ ಪಕ್ಷದ ಬಗ್ಗೆ ಕಾಳಜಿ ಇದ್ದವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರೇಣುಕಾಚಾರ್ಯ ಇದೇ ವೇಳೆ ಸವಾಲು ಹಾಕಿದರು. ಈಗ ಸಿಎಂ ಯಡಿಯೂರಪ್ಪ ಅವರ ಬಗ್ಗೆ ಗೌರವದ ಮಾತು ಆಡುತ್ತಿರುವವರು, ಐದು ವರ್ಷಗಳ ಹಿಂದೆ ಬಿಬಿಎಂಪಿ ಚುನಾವಣೆ ವೇಳೆ ಏನು ಹೇಳಿಕೆ ನೀಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಸೂಚ್ಯವಾಗಿ ಹೇಳಿದ ಅವರು, ನನಗೂ ಮಾತನಾಡಲು ಹಕ್ಕಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಕೂಡ ಆಗಿದ್ದೇನೆಂದರು.

Advertisement

Udayavani is now on Telegram. Click here to join our channel and stay updated with the latest news.

Next