ಸದಾ ಬರಗಾಲದ ದವಡೆಯಲ್ಲಿರುವ ಕಲ್ಪತರು ನಾಡು ತುಮಕೂರು ಜಿಲ್ಲೆಯ ರೈತರು ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಕಡೆ ಮಳೆಯಿಲ್ಲ, ಬೆಳೆಯೂ ಇಲ್ಲ, ಅಂತರ್ಜಲ ಬತ್ತಿ ಹೋಗುತ್ತಿದೆ. ಕುಡಿಯುವ ನೀರಿನ ಯೋಜನೆಗಳು ಮಂದಗತಿಯಲ್ಲಿವೆ. ಉದ್ಯೋಗ ಖಾತ್ರಿ ಯೋಜನೆಯು ಸಮರ್ಪಕ ಅನುಷ್ಠಾನಗೊಳ್ಳದೆ, ಕೆಲವು ಭಾಗಗಳಲ್ಲಿ ರೈತರು ಗುಳೆ ಹೋಗುತ್ತಿದ್ದಾರೆ. ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಯಾವುದಾದರೂ ಕೊಡುಗೆ ನೀಡುವರೇ ಎನ್ನುವುದು ನಿರೀಕ್ಷೆಯಾಗಿದೆ. ಹಣಕಾಸು ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಕೊಡುಗೆ ನೀಡುವರೆಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ.
ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆಯ ಹಾದಿಯಲ್ಲಿರುವ ತುಮಕೂರು ಜಿಲ್ಲೆ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ಯಾಗಿದ್ದು, ಕಳೆದ ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ಯೋಜನೆಗಳು ಈ ಸಮ್ಮಿಶ್ರ ಸರ್ಕಾರದಲ್ಲಿ ಬಂದಿಲ್ಲ ಎನ್ನುವ ಅಸಮಾಧಾನವಿದೆ. ಲೋಕಸಭಾ ಚುನಾ ವಣೆಯ ಹೊಸ್ತಿಲಲ್ಲಿ ಮಂಡಿಸುತ್ತಿರುವ ಈ ಬಾರಿಯ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ವಿಶೇಷ ಯೋಜನೆಗಳು ಘೋಷಣೆ ಆಗುತ್ತವೆಯೇ ಎನ್ನುವುದು ಪ್ರಶ್ನೆಯಾಗಿದೆ.
ತೆಂಗು, ಶೇಂಗಾ ಬೆಳೆಯುವ ರೈತರು, ಜಿಲ್ಲೆಯ ಜನಸಾಮಾನ್ಯರು ಸಂಕಷ್ಟ ಪಡುವ ದಿನಗಳಲ್ಲಿ ಕಲ್ಪತರು ನಾಡಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಜೆಟ್‌ನಲ್ಲಿ ಜಿಲ್ಲೆಯ ಜನ ನೆನಪಿಸಿಕೊಳ್ಳುವ ಯೋಜನೆಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸುವರು ಎನ್ನುವ ಕುತೂಹಲ ಮೂಡಿದೆ.
ಬಜೆಟ್‌ನಲ್ಲಿ ಜಿಲ್ಲೆಯ ನಿರೀಕ್ಷೆ: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ನಲ್ಲಿ ಕಲ್ಪತರು ನಾಡು ತುಮಕೂರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸು ತ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿ ಇದೆ. ತೆಂಗು ಬೆಳೆಗಾರರೇ ಹೆಚ್ಚಿರುವ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಮಳೆ ಕೈಕೊಟ್ಟು ತೆಂಗು ಬೆಳೆ ನಾಶವಾಗಿದೆ. ತೆಂಗು, ಅಡಕೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಜೆಟ್‌ನಲ್ಲಿ ತೆಂಗು ಬೆಳೆಗಾರರಿಗೆ ಅನುಕೂಲ, ತೆಂಗು ಸ್ಪೆಷಲ್ ಎಕನಾಮಿಕ್ ಝೋನ್ ಬಗ್ಗೆ ಪ್ರಸ್ತಾಪ, ಕರ್ನಾಟಕ ಹೆರಿಟೇಜ್ ಹಬ್‌ಗ ಯೋಜನೆ, ತುಮಕೂರು ಮಹಾ ನಗರ ಪಾಲಿಕೆಯ ರಸ್ತೆಯ ಅಭಿವೃದ್ಧಿಗೆ ಇನ್ನೂರು ಕೋಟಿ ಹೆಚ್ಚಿನ ಅನುದಾನವನ್ನು ನೀಡುವರೇ ಎನ್ನುವುದು ಕುತೂಹಲವಾಗಿದೆ. ತುಮಕೂರು ವಿಶ್ವ ವಿದ್ಯಾನಿಲಯ ಕ್ಯಾಂಪಸ್ ನಿರ್ಮಾಣಕ್ಕೆ ವಿಶೇಷ ಅನುದಾನ, ಬರಗಾಲದಿಂದ ಸಂಕಷ್ಟ ಅನುಭವಿಸುತ್ತಿರುವ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್, ತುಮಕೂರಿಗೆ ಮೆಡಿಕಲ್ ಕಾಲೇಜ್, ಮಲ್ಟಿ ಸ್ಪಷಾಲಿಟಿ ಆಸ್ಪತ್ರೆ ಬಗ್ಗೆ ಪ್ರಸ್ತಾಪ ಮಾಡುವರೇ ಎನ್ನುವುದು ನಿರೀಕ್ಷೆಯಾಗಿದೆ.
ಪಾವಗಡಕ್ಕೆ ನೀರಾವರಿ ಯೋಜನೆ?: ಸದಾ ಬಿಸಿಲಿನ ಬೇಗೆಯ ಜೊತೆಗೆ ಬರಗಾಲದಿಂದ ಬಸವಳಿದಿರುವ ಗಡಿ ತಾಲೂಕು ಪಾವಗಡಕ್ಕೆ ಕುಡಿಯುವ ನೀರಿನ ಯೋಜನೆ ಕುರಿತಂತೆ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿ ಸುತ್ತಲೇ ಇದೆ. ಆದರೆ, ಇನ್ನೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ಭಾಗದ ಜನಪ್ರತಿನಿಧಿಗಳು, ರೈತರು ಪಾವಗಡದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಕುಡಿಯಲು ನೀರು ಕೊಡಿ ಎಂದು ಈ ಹಿಂದೆ ಒತ್ತಾಯಿಸಿದ್ದರು. ನ್ಯಾಯಾಲಯ ಶುದ್ಧ ಕುಡಿಯುವ ನೀರು ಪಾವಗಡಕ್ಕೆ ಕೊಡಿ ಎಂದು ಹೇಳಿದೆ. ಆದರೆ, ಪಾವಗಡ ಜನರಿಗೆ ನದಿ ಮೂಲದ ನೀರು ಮರೀಚಿಕೆಯಾಗಿಯೇ ಇದೆ.
ಇದರ ಜೊತೆಗೆ ಜಿಲ್ಲೆಯ ಜನರ ನಿರೀಕ್ಷೆಯಾಗಿ ರುವ ಪ್ರಮುಖ ಕುಡಿಯುವ ನೀರು ಯೋಜನೆ ಯಾದ ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಗಳು ಮಂದಗತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಗಳನ್ನು ಚುರುಕುಗೊಳಿಸುವ ಬಗ್ಗೆ ಪ್ರಸ್ತಾಪ ಮಾಡುವರೇ ಎನ್ನುವುದು ನಿರೀಕ್ಷೆ ಯಾಗಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಗೆ ನೀರು ಹರಿಸುವ ಹೇಮಾವತಿ ಎಡದಂಡೆ ನಾಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ 0-72 ಕಿ.ಮಿ. ನಾಲೆ ಅಭಿವೃದ್ಧಿ ಮಾಡಿತ್ತು. ಆದರೂ ನಾಲೆ ಯಲ್ಲಿ ಹೂಳು ತುಂಬಿಕೊಂಡು ಗಿಡ, ಮರ ಬೆಳೆದಿರು ವುದರಿಂದ ಜಿಲ್ಲೆಗೆ ಹರಿಯ ಬೇಕಿರುವ 25 ಟಿಎಂಸಿ ನೀರು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೇಮಾವತಿ ನಾಲೆ ಅಭಿವೃದ್ಧಿಗೆ ಹಣ ನೀಡಬೇಕೆಂದು ಸಂಸದರು ಒತ್ತಾಯ ಮಾಡಿದ್ದಾರೆ.
ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ, ಇಸ್ರೇಲ್ ಮಾದರಿಯಲ್ಲಿ ಕೃಷಿ ಇನ್ನೂ ಆರಂಭ ವಾಗಿಲ್ಲ. ಜೊತೆಗೆ ಜಿಲ್ಲೆಗೆ ಕ್ರೀಡೆ ಮತ್ತು ಅಂಗ ಸಾಧನೆ, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ, ಕ್ರೀಡಾ ಉತ್ಪನ್ನಗಳ ಕೈಗಾರಿಕಾ ವಲಯ ಮಾಡಲು 2000 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ, ಈವರೆಗೂ ಈ ಯೋಜನೆಗಳಲ್ಲಿ ಯಾವುದೂ ಅನುಷ್ಠಾನವಾಗಿಲ್ಲ. ಈ ಬಗ್ಗೆ ಕೇವಲ ಚರ್ಚೆ ಗಳಿಗಷ್ಟೇ ಸೀಮಿತವಾಗಿದೆ.
* ಚಿ.ನಿ.ಪುರುಷೋತ್ತಮ್