ಬೆಂಗಳೂರು: ತಮಿಳಿನ ಸಂತ ಕವಿ ತಿರುವಳ್ಳುವರ್ ಹಾಗೂ ಕನ್ನಡದ ಸರ್ವಶ್ರೇಷ್ಟ ವಚನಕಾರ ಸರ್ವಜ್ಞರು ಕನ್ನಡ ಮತ್ತು ತಮಿಳಿಗರನ್ನು ಬೆಸೆದಿದ್ದು ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಅನುಪಮ ಕೊಡುಗೆ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರು ಅಲಸೂರು ಬಳಿ ಇರುವ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾಗಿ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಮತ್ತು ತಮಿಳು ಭಾಷಿಗರ ಐಕ್ಯತೆಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ವರ್ಷಗಳಿಂದ ಜಟಿಲವಾಗಿದ್ದ ಈ ಸಮಸ್ಯೆಯನ್ನು ಹನ್ನೊಂದು ವರ್ಷಗಳ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಿರುವಳ್ಳುವರ್ ಪ್ರತಿಮೆ ಅನಾವರಣಗೊಂಡಿತು. ಅಂದೇ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಯಾಯಿತು. ಎರಡು ರಾಜ್ಯಗಳ ನಡುವೆ ಇದೊಂದು ಐತಿಹಾಸಿಕ ಘಟನೆಯಾಯಿತು ಎಂದು ನುಡಿದರು.
ತಮ್ಮ ಸಾಹಿತ್ಯ, ಬರವಣಿಗೆ ಹಾಗೂ ತತ್ತ್ವಾದರ್ಶಗಳ ಮೂಲಕ ಸಮಾನತೆಯನ್ನು ಸಾರಿದ ತಿರುವಳ್ಳುವರ್, ಅವರ ತಿರುಕ್ಕುರಳ್ ಕೃತಿ ಅತ್ಯಂತ ಮಹತ್ತ್ವದ್ದಾಗಿದೆ. ಅದರ ಸಾರ ಎಲ್ಲರಿಗೂ ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ. ಅವರು ಬರೆದಿದ್ದೆಲ್ಲವೂ ನಮ್ಮ ಜೀವನಕ್ಕೆ ಹತ್ತಿರವಾಗಿದೆ ಎಂದರು.
ಸರ್ವಜ್ಞರು ಮತ್ತು ತಿರುವಳ್ಳುವರ್ ಭಾಷೆ, ಗಡಿ ಮೀರಿದ ತತ್ತ್ವಜ್ಞಾನಿಗಳು. ಜನರ ನಡುವೆಯೇ ಇದ್ದು ಸಮಾಜವನ್ನು ತಿದ್ದಿದರು. ಅವರಿಬ್ಬರು ಬಿಟ್ಚುಹೋದ ಜ್ಞಾನದ ಬೆಳಕು ಎಲ್ಲೆಡೆ ಅನನ್ಯವಾಗಿ ಪಸರಿಸಿದೆ ಎಂದು ಹೇಳಿದರು.
ಭಾಷಾ ಸಾಮರಸ್ಯ: ಸರ್ವಜ್ಞರು ಮತ್ತು ತಿರುವಳ್ಳುವರ್ ಪ್ರತಿಮೆಗಳ ಸ್ಥಾಪನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಪ್ರಜೆಗಳ ನಡುವಿನ ಬಾಂಧವ್ಯ ಮತ್ತಷ್ಟು ಗಾಢವಾಗಿದೆ. ಕನ್ನಡ ನಾಡು ಅತ್ಯಂತ ಸಹಿಷ್ಣುತೆಯುಳ್ಳ ರಾಜ್ಯ. ಇಲ್ಲಿ ಪ್ರತಿಯೊಬ್ಬರೂ ನೆಮ್ಮದಿ, ಸಂತಸದಿಂದ ಬಾಳುತ್ತಿದ್ದಾರೆಂದು ಡಿಸಿಎಂ ಹೇಳಿದರು.
ಈ ಸಂದರ್ಭದಲ್ಲಿ ತಮಿಳು ಸಂಘದ ಪದಾಧಿಕಾರಿಗಳು, ಐಕ್ಯತಾ ಸಮಿತಿ ಸದಸ್ಯರು ಹಾಜರಿದ್ದರು.