ಬೆಂಗಳೂರು: ರಾಜ್ಯದ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಬಗ್ಗೆ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ವಿವರಣೆ ನೀಡಿದರು.
ಡಿಸಿಎಂ ಗೋವಿಂದ ಕಾರಜೋಳ ಅವರೊಂದಿಗೆ ರಾಜಭವನಕ್ಕೆ ತೆರಳಿದ ಡಾ.ಅಶ್ವತ್ಥನಾರಾಯಣ, ಈವರೆಗೂ ಸೋಂಕು ತಡೆಗಟ್ಟಲು ಲಾಕ್‌ಡೌನ್, ಲಸಿಕೆ ಅಭಿಯಾನ, ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಸಿಬ್ಬಂದಿ ನೇಮಕ ಸೇರಿದಂತೆ ಸರಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಸಮಗ್ರ ಮಾಹಿತಿ ನೀಡಿದರು.
ಲಾಕ್‌ಡೌನ್ ನಂತರ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ದರವೂ ಕಡಿಮೆಯಾಗಿ ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಇದರ ಜತೆಯಲ್ಲೇ 45 ವರ್ಷ ಮೀರಿದ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡವ ಕೆಲಸ ನಡೆಯುತ್ತಿದೆ. ಇಡೀ ರಾಜ್ಯಾದ್ಯಂತ ಆಮ್ಲಜನಕ, ಔಷಧಿ, ರೆಮಿಡಿಸಿವಿರ್ ಕೊರತೆಯನ್ನು ನೀಗಿಸಲಾಗಿದೆ ಎಂದು ಅಂಕಿ- ಅಂಶಗಳ ಸಹಿತ ರಾಜ್ಯಪಾಲರಿಗೆ ವಿವರಣೆ ಸಲ್ಲಿಸಿದರು.
ಇದನ್ನೂ ಓದಿ:ಮೇ 27ರಂದು ಒಡಿಶಾ, ಪಶ್ಚಿಮಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ
ಬ್ಲ್ಯಾಕ್ ಫಂಗಸ್ ಬಗ್ಗೆಯೂ ರಾಜ್ಯಪಾಲರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಈ ಕಾಯಿಲೆಗೆ ಸಂಬಂಧಿಸಿದ ಔಷಧಿಗಳ ಕೊರತೆ ನಿವಾರಣೆಗೆ ಎಲ್ಲ ಪ್ರಯತ್ನ ನಡೆದಿದೆ. ನಿರಂತರವಾಗಿ ಕೇಂದ್ರ ಸರಕಾರದ ಜತೆ ಸಂಪರ್ಕದಲ್ಲಿದ್ದು, ಇಡೀ ಸರಕಾರ ಒಂದು ತಂಡದ ರೂಪದಲ್ಲಿ ಕೆಲಸ ಮಾಡುತ್ತಿದೆ ಎಂದು ರಾಜ್ಯಪಾಲರಿಗೆ ತಿಳಿಸಿದರು.