Advertisement

ಬಿಲ್ಲವ-ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಬೆಂಬಲ : ಡಿಸಿಎಂ ಡಾ|ಅಶ್ವಥ ನಾರಾಯಣ

11:33 AM Nov 28, 2020 | keerthan |

ಕಾಪು: ಬಿಲ್ಲವ – ಈಡಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಯ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಸ್ವಾಗತಾರ್ಹವೇ ಆಗಿದ್ದು, ವಿವಿಧ ಜಾತಿ, ಪಂಗಡ ಮತ್ತು ಸಮುದಾಯಗಳ ಜನರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಸಮುದಾಯದ ಜನರು ತಮ್ಮ ಸಮುದಾಯದ ಬೇಡಿಕೆಗಳನ್ನು ಸರಕಾರದ ಮುಂದಿಡುವುದು ಜನರ ಕರ್ತವ್ಯವಾಗಿದೆ. ಬಿಲ್ಲವ – ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಬಗೆಗಿನ ಪ್ರಸ್ತಾಪ ಸ್ವಾಗತಾರ್ಹವಾಗಿದೆ ಎಂದ ಉಪಮುಖ್ಯಮಂತ್ರಿ ಡಾ| ಅಶ್ವಥ ನಾರಾಯಣ ಹೇಳಿದರು.

Advertisement

ಶುಕ್ರವಾರ ಸಂಜೆ ಬೆಳಪು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮಂಗಳೂರು ವಿವಿ ಸಂಯೋಜಿತ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ, ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕಾಪು ವಿಧಾನಸಭಾ ಕ್ಷೇತ್ರದ ಬೆಳಪುವಿನಲ್ಲಿ ರಾಜ್ಯಕ್ಕೇ ಮಾದರಿಯಾಗುವಂತೆ ವಿಜ್ಞಾನ ಸಂಶೋಧನಾ ಕೇಂದ್ರ, ಸರಕಾರಿ ಪಾಲೆಟ್ನಿಕ್ ಕಾಲೇಜು ಮತ್ತು ಸಣ್ಣ ಕೈಗಾರಿಕಾ ಪಾರ್ಕ್ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹವಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ಮೂಲಗಳಿಂದ ಸಂಪನ್ಮೂಲಗಳನ್ನು ಕ್ರೋಡಿಸಿಕರಿಸಿಕೊಂಡು ವೇಗವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಪ್ರಯತ್ನಿಸಲಾಗುವುದು. ವಿಜ್ಞಾನ ಸಂಶೋಧನಾ ಕೇಂದ್ರ ಸಹಿತವಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜೋಡಿಸುವ ಮೂಲಕ ಬೆಳಪು ಮಾದರಿ ಗ್ರಾಮವಾಗಿ ಮೂಡಿ ಬರುತ್ತಿದೆ. ಮಾದರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು, ಗ್ರಾಮಾಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶಾಸಕ ಲಾಲಾಜಿ ಆರ್. ಮೆಂಡನ್, ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ಸಮರ್ಪಣಾ ಮನೋಭಾವದ ಸೇವೆ ಶ್ಲಾಘನೀಯವಾಗಿದೆ ಎಂದರು.

ಇದನ್ನೂ ಓದಿ:ಮದುವೆ ಮಾಡಿಕೊಳ್ಳುವುದಾಗಿ ಹೇಳಿದಾತ ಲಕ್ಷಾಂತರ ರೂ. ಲೂಟಿ ಮಾಡಿ ಪರಾರಿ ಆದ.!

ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಈಗಾಗಲೇ ಬಲಿಷ್ಟವಾಗಿ ಬೆಳೆದಿದ್ದು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಂಘಟನಾತ್ಮಕವಾಗಿ ಮತ್ತಷ್ಟು ಬಲಯುತವಾಗಿದೆ. ಪ್ರತೀ ವ್ಯಕ್ತಿಯ ರಾಜಕೀಯ ಬುನಾದಿಗೆ ಗ್ರಾಮ ಪಂಚಾಯತ್ ಚುನಾವಣೆಯೇ ಪೂರಕವಾಗಿದ್ದು, ರಾಜ್ಯಾದ್ಯಂತ ಈ ಬಾರಿ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತರ ಆಡಳಿತದ ನಿರೀಕ್ಷೆಯಲ್ಲಿದ್ದೇವೆ. ಅದಕ್ಕೆ ಪೂರ್ವಭಾವಿಯಾಗಿ ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಕೇಂದ್ರ-ರಾಜ್ಯಗಳು ನಡೆಸಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿದ್ದು, ಚುನಾವಣೆಗೆ ನಾವು ಸಿದ್ಧರಿದ್ದೇವೆ ಎಂದರು.

Advertisement

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ಸಚಿವ ಸ್ಥಾನ ನಿರೀಕ್ಷೆಯ ಬಗ್ಗೆ ಮಾತನಾಡಿದ ಅವರು ರಾಜಕೀಯದಲ್ಲಿ ಎಲ್ಲರಿಗೂ ನಿರೀಕ್ಷೆ, ಆಕಾಂಕ್ಷೆಗಳು ಸಹಜ. ಇದ್ದ ಒಂದು ಸ್ಥಾನದಿಂದ ಮೇಲಿನ ಸ್ಥಾನಕ್ಕೆ ಹೋಗಬೇಕು. ಬೇರೆ ಬೇರೆ ಅವಕಾಶಗಳನ್ನು ಪಡೆದುಕೊಳ್ಳಬೇಕೆಂಬ ಜನಪ್ರತಿನಿಧಿಗಳ ಆಸೆ ಸಹಜವೇ ಆಗಿದೆ. ಶಾಸಕ ಲಾಲಾಜಿ ಅವರದ್ದು ಸರಳ ವ್ಯಕ್ತಿತ್ವವಾಗಿದ್ದು, ಪಕ್ಷ ಮತ್ತು ಸರಕಾರದಲ್ಲಿ ಅವರಿಗೆ ಒಳ್ಳೆಯ ಗೌರವವಿದೆ. ಸರಕಾರದಲ್ಲಿಯೂ ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧರಿಸುತ್ತಾರೆ ಎಂದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಿವಿಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next