ಬೆಂಗಳೂರು: ಇತ್ತೀಚೆಗೆ ನಡೆದ ಯುಪಿಎಸ್’ಸಿ ಪರೀಕ್ಷೆಯಲ್ಲಿ ಸತತ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಿರುವ ವಿಶೇಷಚೇತನ ಪರೀಕ್ಷಾರ್ಥಿ ಮೇಘನಾ ಅವರನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ನಗರದಲ್ಲಿ ಮಂಗಳವಾರ ಸನ್ಮಾನಿಸಿ ಗೌರವಿಸಿದರು.
ಡಾ. ರಾಜಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಅವರು, 465ನೇ ರಾಂಕ್ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಅವರಿಗೆ ಎರಡೂ ಕಣ್ಣುಗಳು ಕಾಣುವುದಿಲ್ಲ. ಇದರ ನಡುವೆಯೂ ಅವರು ತೇರ್ಗಡೆ ಆಗಿರುವುದು ನಾವೆಲ್ಲರೂ ಹೆಮ್ಮಪಡುವ ಸಂಗತಿ ಎಂದು ಡಿಸಿಎಂ ಹೇಳಿದರು.
ಯಾವುದೇ ರೀತಿಯ ಅಂಗವೈಕಲ್ಯ ಇಲ್ಲದ ವಿದ್ಯಾರ್ಥಿಗಳೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಲ್ಲ. ಆದರೆ ಮೇಘನಾ ಅವರು ಅಂಥ ಸವಾಲನ್ನು ಎದುರಿಸಿ ಯಶಸ್ವಿಯಾಗಿ ಗುರಿ ಮುಟ್ಟಿ ಇತರೆ ಪರೀಕ್ಷಾರ್ಥಿಗಳಿಗೆ ಮಾದರಿ ಹಾಗೂ ಪ್ರೇರಣೆಯಾಗಿದ್ದಾರೆಂದು ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಪರೀಕ್ಷಾರ್ಥಿಗಳಿಗೆ ಆಸರೆಯಾಗಿ ನಿಂತು ಕೆಲಸ ಮಾಡುತ್ತಿರುವ ಡಾ. ರಾಜಕುಮಾರ್ ಅಕಾಡೆಮಿಯ ಕಾರ್ಯವನ್ನು ಡಿಸಿಎಂ ಮನಸಾರೆ ಶ್ಲಾಘಿಸಿದರು.
ಇದೇ ವೇಳೆ ಮಾತನಾಡಿದ ಮೇಫನಾ ಅವರು, ಜನರ ಸೇವೆಯನ್ನು ಮಾಡುತ್ತ ನನ್ನ ಸಾಧನೆಯ ಸಾರ್ಥಕತೆಯನ್ನು ಕಾಣುತ್ತೇನೆ. ನನ್ನ ಸಾಧನೆಗೆ ನೆರವಾದ ಡಾ. ರಾಜಕುಮಾರ್ ಅಕಾಡೆಮಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.
ಅಕಾಡೆಮಿಯ ಮುಖ್ಯಸ್ಥ ಯುವರಾಜ್ ಕುಮಾರ್, ಅವರ ಪತ್ನಿ ಶ್ರೀದೇವಿ ಅವರು ಉಪಸ್ಥಿತರಿದ್ದರು.