ನವದೆಹಲಿ: ಭಾರತ್ ಬಯೋಟೆಕ್ ನ ಕೋವಿಡ್ ನಾಸಲ್ (ಮೂಗಿನ ಮೂಲಕ ಹಾಕುವ) ಲಸಿಕೆಯನ್ನು ನಿರ್ಬಂಧಿತ ತುರ್ತು ಸಂದರ್ಭದಲ್ಲಿ ಬಳಸಲು ಡಿಸಿಜಿಐ ಮಂಗಳವಾರ (ಸೆಪ್ಟೆಂಬರ್ 06) ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ ಸುಖ್ ಮಾಂಡವ್ಯ ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲೇ ಹೆಡೆ ಎತ್ತಿದ ಕಾಳಿಂಗ ಸರ್ಪ!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಜ್ಞಾನ, ಸಂಶೋಧನೆ, ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡಿದೆ ಎಂದು ಮಾಂಡವ್ಯ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದು ಭಾರತದ ಮೊದಲ ನಾಸಲ್ ಕೋವಿಡ್ ಲಸಿಕೆಯಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನಿರ್ಬಂಧಿತ ತುರ್ತು ಸಂದರ್ಭದಲ್ಲಿ ಬಳಸುವ ನಿಟ್ಟಿನಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ನ ನಾಸಲ್ ಲಸಿಕೆ ಬಳಸಲು ಡಿಸಿಜಿಐ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಅನುಮತಿ ನೀಡಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ ನಾಸಲ್ ಲಸಿಕೆ ಬಳಕೆ ಮಾಡಲು ಅನುಮತಿ ನೀಡುವ ಮೂಲಕ ದೇಶದಲ್ಲಿ ನ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡಲು ಇನ್ನಷ್ಟು ಬಲಬಂದಂತಾಗಿದೆ ಎಂದು ವರದಿ ತಿಳಿಸಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಸುಮಾರು 4,000 ಸ್ವಯಂ ಸೇವಕರ ಮೇಲೆ ನಾಸಲ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಸಿದ್ದು, ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.