ನವದೆಹಲಿ:ಭಾರತದಲ್ಲಿ ಕೋವಿಡ್ 19ರ ನಾಲ್ಕನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು 6ರಿಂದ 12ವರ್ಷದೊಳಗಿನ ಮಕ್ಕಳಿಗೆ ನೀಡಲು ಭಾರತದ ಔಷಧ ನಿಯಂತ್ರಕ ಮಂಡಳಿ (ಡಿಸಿಜಿಐ) ಮಂಗಳವಾರ (ಏಪ್ರಿಲ್ 26) ಅನುಮೋದನೆ ನೀಡಿರುವುದಾಗಿ ಎನ್ ಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಕೋವಿಡ್ ನಾಲ್ಕನೇ ಅಲೆ ಬಗ್ಗೆ ಅನಗತ್ಯ ಭಯ ಬೇಡ; ಸಿಎಂ ಬೊಮ್ಮಾಯಿ
ಪ್ರಸ್ತುತ ಕೋವಿಡ್ 19 ಸೋಂಕು ತಡೆಗಟ್ಟಲು 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಬಯೋಲಾಜಿಕಲ್ ಇಎಸ್ ಕೋರ್ಬೆವ್ಯಾಕ್ಸ್ ಅನ್ನು ನೀಡಲು ಅನುಮತಿ ನೀಡಿದೆ. ಹಾಗೂ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಿದೆ ಎಂದು ವರದಿ ವಿವರಿಸಿದೆ.
12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಮಾಡಲು ಡಿಸಿಜಿಐ ಅನುಮತಿ ನೀಡಿತ್ತು. 2021ರ ಡಿಸೆಂಬರ್ 24ರಂದು ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿತ್ತು. ನಂತರ 2022ರ ಜನವರಿಯಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಮಾರ್ಚ್ 16ರಿಂದ 12-14 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಚಾಲನೆ ನೀಡಲಾಗಿತ್ತು. ಏತನ್ಮಧ್ಯೆ 2ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ 19 ಲಸಿಕೆ ನೀಡುವ ಬಗ್ಗೆ ಹೆಚ್ಚುವರಿ ಮಾಹಿತಿ ನೀಡುವಂತೆ ಡಿಸಿಜಿಐನ ಸಬ್ಜೆಕ್ಟ್ ಎಕ್ಸ್ ಫರ್ಟ್ ಕಮಿಟಿ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.