Advertisement

ಸಾಲ ಪಡೆದವರು ಒಂದೇ ಪಕ್ಷದವರಾ?

02:15 PM Oct 03, 2021 | Team Udayavani |

ಕೋಲಾರ: ಜನಪರವಾದ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದಿರುವ ಸ್ತ್ರೀಶಕ್ತಿ ಸಂಘಗಳು, ರೈತರು ಒಂದೇ ಪಕ್ಷ ಅಥವಾ ಒಂದೇ ಜಾತಿಯವರಾ? ಪ್ರಜ್ಞೆ ಇಲ್ಲದೇ ಮಾತನಾಡದಿರಿ ಎಂದು ಬ್ಯಾಂಕ್‌ ವಿರೋಧಿಗಳಿಗೆ ಮಾಜಿ ಸ್ವೀಕರ್‌, ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಟಾಂಗ್‌ ನೀಡಿದರು.

Advertisement

ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡರ ನಿವಾಸ ದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ನೀಡುವಾಗ ಮಹಿಳೆಯರು, ರೈತರನ್ನು ನೀವು ಯಾವ ಜಾತಿ, ಪಕ್ಷ ಎಂದು ಕೇಳಿ ಸಾಲ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಡಿಸಿಸಿ ಬ್ಯಾಂಕ್‌ ಜನಪರವಾಗಿದೆ. ಆದರೂ, ಕೆಲವರು ಪ್ರಜ್ಞೆಯಿಲ್ಲದೆ ಏನೇನೋ ಮಾತನಾಡಿ ವಿರೋಧಿಸುತ್ತಿದ್ದಾರೆ. ವಿರೋಧಗಳು ಇನ್ನೂ ಹೆಚ್ಚಾಗಲಿ ನಮ್ಮ ಅಭ್ಯಂತರವಿಲ್ಲ. ಅವು ಹೆಚ್ಚಾದಷ್ಟು ನಾವೂ ಸಹ ಹೆಚ್ಚು-ಹೆಚ್ಚು ಕೆಲಸ ಮಾಡಿ ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.

ಅರಿತು ಮಾತನಾಡಲಿ: ಡಿಸಿಸಿ ಬ್ಯಾಂಕ್‌ನಲ್ಲಿ ಹಣ ದುರುಪಯೋಗವಾಗಿದ್ದರೆ ಯಾವ ಹಂತ ದಲ್ಲಾದರೂ ವಿಚಾರಣೆ ಮಾಡಿಕೊಳ್ಳಿ ನಮ್ಮ ಅಭ್ಯಂತರವಿಲ್ಲ. ಸ್ತ್ರೀಶಕ್ತಿ ಸಂಘಗಳು, ರೈತರು

ಸಾಲವನ್ನು ಪಡೆದುಕೊಂಡಿದ್ದಾರೆ. ಅವರೆಲ್ಲರೂ ಒಂದೇ ಪಕ್ಷ ಅಥವಾ ಒಂದೇ ಜಾತಿಯವರಾಗಲು ಸಾಧ್ಯವೇ ಎಂಬುದನ್ನು ಅರಿತು ಮಾತನಾಡಲಿ ಎಂದು ಹೇಳಿದರು.

Advertisement

ಹಲವು ಯೋಜನೆ ಜಾರಿ: ಪ್ರಜ್ಞೆ ಇಲ್ಲದೇ ಮಾತನಾಡುವವರಿಗೆ ನಾವ್ಯಾಕೆ ಉತ್ತರ ನೀಡಬೇಕು. ಯಾವುದೇ ಕಾರಣಕ್ಕೂ ಜನಪರ ಕೆಲಸಗಳನ್ನು ನಿಲ್ಲಿಸುವುದಿಲ್ಲ. 50 ಸಾವಿರ ನೀಡುತ್ತಿರುವ ಸಾಲದ ಪ್ರಮಾಣವನ್ನು 1ಲಕ್ಷ ರೂ.ಗೆ ಏರಿಕೆ ಮಾಡುತ್ತೇವೆ. ಈಗಾಗಲೇ ಶಾಸಕರೆಲ್ಲರೂ ತೆರಳಿ ನಬಾರ್ಡ್‌ ಅಧಿಕಾರಿಗಳನ್ನು ಭೇಟಿಯಾಗಿದ್ದು, ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.

ಸಾಲ ವಿತರಣೆ ಮದುವೆ ಆರತಕ್ಷತೆಯೇ: ಸಾಲ ವಿತರಣೆ ಕಾರ್ಯಕ್ಕೆ ಕರೆಯಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅದೇನು ಮದುವೆ ಆರತಕ್ಷತೆ ಕಾರ್ಯಕ್ರಮವಾ? ಇಲ್ಲವೇ ಎಂದಾದರೂ ಬಂದು ಸಾಲ ಕೊಡಿ ಎಂದು ಕೇಳಿದ್ದನ್ನು ನಾವು ನಿರಾಕರಿಸಿದ್ದೇವಾ ಅಥವಾ ಪಕ್ಷವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಿವಾ ಹೇಳಲಿ ಎಂದು ಸವಾಲು ಹಾಕಿದರು.

ಯಾರೋ ಹೇಳಿದ್ದು ಹೇಳಿದ್ದಾರೆ: ತಿಥಿ ಇನ್ನಿತರೆ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಪುರೋಹಿತರು ಬಂದು ಪೂಜಾ ಕಾರ್ಯ ಮಾಡುತ್ತಾರೆ. ಅವರು ಹೇಳಿದ್ದನ್ನು ಅಲ್ಲಿ ಕುಳಿತವರು ಮಾಡುತ್ತಾರೆ. ಹಾಗೆಯೇ ಯಾರೋ ಹೇಳಿದ್ದನ್ನು ಕೇಳಿ ಜಿಲ್ಲಾ ಉಸ್ತುವಾರಿ ಸಚಿವರು ವಿಷಯ ಗೊತ್ತಿಲ್ಲದೆ ಏನೇನೋ ಮಾತನಾಡಿದ್ದಾರೆ ಬಿಡಿ. ಇದು ಎಂದಿಗೂ ಬಡವರ ಬ್ಯಾಂಕ್‌, ಬಡವರಿಗಾಗಿಯೇ ಕೆಲಸಗಳನ್ನು ಮಾಡುತ್ತೇವೆ ಅಷ್ಟೇ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮದ್‌, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಮತ್ತಿತರರು ಹಾಜರಿದ್ದರು.

ಯಾರು ಯಾವ ಪಕ್ಷವಾದ್ರೂ ಸೇರಬಹುದು-

ಸಂವಿಧಾನದಲ್ಲಿ ಅವಕಾಶವಿದೆ ಯಾರು ಯಾವ  ಪಕ್ಷಕ್ಕೆ ಬೇಕಾದರೂ ಬರಬಹುದು. ಕೃಪಾ ಕಟಾಕ್ಷ ತೋರಲು ನಾನು ಈಶ್ವರನಾ? ನನ್ನಂತಹವರ ಕೃಪಾ ಕಟಾಕ್ಷದ ಅನಿವಾರ್ಯ ಸ್ಥಿತಿ ಕೋಲಾರ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರಿಗೆ ಬಂದಿಲ್ಲ.

ಅವರದ್ದೇ ಆದ ಶಕ್ತಿಯಿದೆ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಹೇಳಿದರು. ನಾನೂ ಕಾಂಗ್ರೆಸ್‌ನಲ್ಲಿದ್ದೇನೆ ಕೆ.ಎಚ್‌.ಮುನಿಯಪ್ಪನವರೂ ಇದ್ದಾರೆ. ಅವರ ಜತೆ ಹೊಂದಾಣಿಕೆ ಹೇಗೆ ಮಾಡಿಕೊಳ್ಳಲಾಗುತ್ತದೆ. ಜನರ ಜತೆ ಹೊಂದಾಣಿಕೆ ಮಾಡಿಕೊಳ್ಳ ಬೇಕು. ಸ್ನೇಹಿತರು ಹೊಂದಾಣಿಕೆ ಮಾಡಿಕೊಂಡರೆ ಮಕ್ಕಳಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ವರ್ತೂರ್‌ ಪ್ರಕಾಶ ಕಥೆ ನನಗೆ ಗೊತ್ತಿಲ್ಲ, ನನ್ನನ್ನು ಅವರು ಸಂಪರ್ಕಿಸಿಯೂ ಇಲ್ಲ ಎಂದು ವಿವರಿಸಿದರು.

ಬಲವಂತದ ಮತಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌, ಸಾರ್ವಜನಿಕ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಿರುವ ವೇದಿಕೆಯಲ್ಲಿ ಮತಾಂತರ ಮತ್ತಿತರ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಸರಿಯಲ್ಲ. ಯಾರಿಗೆ ಯಾವ ಮತದಲ್ಲಿ ಇರಬೇಕೆಂದು ಅನಿಸಿದರೆ ಅದರಲ್ಲಿ ಇರಬಹುದು ಎಂದು ಹೇಳಿದರು. ಅಂಬೇಡ್ಕರರು ಬೌದ್ಧ ಧರ್ಮವನ್ನು ಸ್ವೀಕರಿಸಲಿಲ್ಲವೇ? ಅವರಿಗಿಂತ ಮಹಾನುಭಾವರು ಯಾರಾದರೂ ಇದ್ದಾರಾ? ವಿವೇಕಾನಂದರು, ಬಸವಣ್ಣರು ಏನು ಹೇಳಿದರು ಎನ್ನುವುದು ಗೊತ್ತಿದೆಯಾ?

ಮಾನವ ಧರ್ಮ ಮುಖ್ಯ ಅದನ್ನು ಅರ್ಥ ಮಾಡಿಕೊಂಡರೆ ಸಾಕು ಎಂದರು.ಇನ್ನು ಕೆ.ಸಿ.ವ್ಯಾಲಿ ವಿಚಾರವಾಗಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಜನರಿಗೆ ಆಗಬೇಕಾದ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದ್ದೇವೆ ಅಷ್ಟೇ. 2ನೇ ಹಂತಕ್ಕೆ ಎಲ್ಲ ತಯಾರಿಗಳನ್ನು ಮಾಡಲಾಗಿ

ಟೆಂಡರ್‌ ಕಾರ್ಯವೂ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡಿ ಕೆಲಸ ಬೇಗ ಆರಂಭಿಸಿದರೆ ಜಿಲ್ಲೆಯ ಮತ್ತಷ್ಟು ಕೆರೆಗಳಿಗೆ ಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next