ಕೋಲಾರ: ಪ್ರಪಾತಕ್ಕೆ ನೂಕಲ್ಪಟ್ಟಿದ್ದ ಬ್ಯಾಂಕನ್ನು ಕಳೆದ 9 ವರ್ಷದಿಂದ ನಮ್ಮ ಆಡಳಿತ ಮಂಡಳಿ ಹಗಲಿರುಳು ಶ್ರಮಿಸಿ ರಾಜ್ಯಕ್ಕೆ ಮಾದರಿ ಆಗುವಂತೆ ಮಾಡಿದ್ದೇವೆ. ಆಡಳಿತ ಮಂಡಳಿಯ ಈ ಶ್ರಮ ವ್ಯರ್ಥ ಮಾಡದಿರಿ, ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದರೆ ನೀವು ಬೀದಿಗೆ ಬೀಳುತ್ತೀರಿ ಎಂದು ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ಬ್ಯಾಂಕಿನ ಸಭಾಂಗಣದಲ್ಲಿ ಶನಿವಾರ ನಡೆದ ಆನ್‌ಲೈನ್ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 9 ವರ್ಷ ಹಿಂದೆ ಬ್ಯಾಂಕ್ ದಿವಾಳಿಯಾಗಿ ಸಂಬಳವೂ ಇಲ್ಲದೇ ಸಂಕಷ್ಟ ಅನುಭವಿಸಿದ್ದೀರಿ, ಆ ನೋವನ್ನು ಮರೆಯದಿರಿ, ಮತ್ತೆ ಬ್ಯಾಂಕ್ ಹಾಳಾಗಲು ಕಾರಣರಾಗದಿರಿ ಎಂದು ಕಿವಿಮಾತು ಹೇಳಿದರು.
ಕಷ್ಟಕ್ಕೆ ಸಿಲುಕುತ್ತೀರಿ: ಕೆಲವು ಸಿಬ್ಬಂದಿ ಇನ್ನೂ ಮೈಚಳಿ ಬಿಟ್ಟಿಲ್ಲ, ಸಾಲ ನೀಡು ವುದು ಮಾತ್ರವಲ್ಲ, ಸಾಲ ವಸೂಲಿ, ಠೇವಣಿ ಸಂಗ್ರಹವೂ ಮುಖ್ಯ ಎಂಬುದನ್ನು ಮರೆಯದಿರಿ, ಬ್ಯಾಂಕ್ ಉಳಿಸುವಲ್ಲಿ ನಿಮ್ಮ ಶ್ರದ್ಧೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ, ಸರಿಪಡಿಸಿಕೊಂಡು ಸಾಗದಿದ್ದರೆ ನೀವೇ ಕಷ್ಟಕ್ಕೆ ಸಿಲುಕುತ್ತೀರಿ ಎಂದು ತಾಕೀತು ಮಾಡಿದರು.
ಸಹಕಾರಿ ಬ್ಯಾಂಕಿನ ಮೂಲಕ ಸರ್ಕಾರ ನೀಡುವ ವಿವಿಧ ಯೋಜನೆ ಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದೇವೆ ಎಂಬ ಆತ್ಮತೃಪ್ತಿ ಇದೆ, ಈ ಗೌರವ ಉಳಿಸಿಕೊಂಡು ಹೋಗಿ ಎಂದರು.
8 ಲಕ್ಷ ಕುಟುಂಬಗಳಿಗೆ ಸಾಲ ಸೌಲಭ್ಯ: 9 ವರ್ಷಗಳಲ್ಲಿ ನಾವು ಮಾಡಿರುವ ಸಾಧನೆ ಸಾಮಾನ್ಯವಾದುದಲ್ಲ, ಅವಿ ಭಜಿತ ಜಿಲ್ಲೆಯ 8 ಲಕ್ಷ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸಿದ್ದೇವೆ, ಸಾಲ ನೀಡುವಾಗ ಜಾತಿ, ಧರ್ಮ, ಪಕ್ಷ ನೋಡಿಲ್ಲ. ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಎಷ್ಟೋ ಜನ ಲೇವಡಿ ಮಾಡಿದ್ದರು. ದಿವಾಳಿಯಾದ ಸಂಸ್ಥೆಗೆ ವಾರಸುದಾರರ ಎಂದೆಲ್ಲಾ ಹಾಸ್ಯ ಮಾಡಿದ್ದರು. ಈ ಎಲ್ಲಾ ಟೀಕೆಗಳು, ಆರೋಪ ಸಹಿಸಿಕೊಂಡು ಬ್ಯಾಂಕನ್ನು ಮುನ್ನಡೆಸಿದ್ದೇವೆ ಎಂದು ಹೇಳಿದರು.
ಇದೊಂದು ಸಹಕಾರಿ ಸಂಸ್ಥೆ, ಸಮಾಜದ ಕಟ್ಟಕಡೆಯ ರೈತ, ಮಹಿಳೆ, ಬಡವರಿಗೆ ನೆರವಾಗಬೇಕು ಎಂಬ ಸಂಕಲ್ಪ ನನ್ನದಾಗಿದೆ. ಬಡ ರೈತರು ಎಂದಿಗೂ ಬ್ಯಾಂಕಿಗೆ ದ್ರೋಹ ಬಗೆಯ ಲಾರರು, ಶ್ರೀಮಂತರಿಗೆ ವಾಣಿಜ್ಯ ಬ್ಯಾಂಕುಗಳು ಸಾಲ ನೀಡುತ್ತವೆ. ಆದರೆ, ನಾವು ಭದ್ರತೆ ನೀಡಲು ಆಸ್ತಿಯಿಲ್ಲದ ಬಡ ರೈತರು, ಮಹಿಳೆಯರಿಗೆ ಭದ್ರತೆ ರಹಿತವಾಗಿ ಸಾಲ ನೀಡಿದ್ದೇವೆ ಅದೇ ನಮ್ಮ ಹೆಗ್ಗಳಿಕೆ ಎಂದು ಹೇಳಿದರು.
ಬ್ಯಾಂಕಿನ ನಿರ್ದೇಶಕ ಕೆ.ವಿ. ದಯಾ ನಂದ್, ಎಜಿಎಂಗಳಾದ ಎಂ. ಆರ್. ಶಿವಕುಮಾರ್, ಖಲೀಮುಲ್ಲಾ, ಹುಸೇನ್ ದೊಡ್ಡಮುನಿ, ಅರುಣ್ ಪ್ರಸಾದ್, ಪದ್ಮಮ್ಮ, ಹ್ಯಾರೀಸ್, ಅಮ್ಜದ್, ನವೀನ್, ಬೇಬಿ ಶಾಮಿಲಿ, ಮಮತ, ಅಮರೇಶ್ ಉಪಸ್ಥಿತರಿದ್ದರು.