ಚಾಮರಾಜನಗರ: ಜಿಲ್ಲೆಯ ಐತಿಹಾಸಿಕ ಪರಂಪರೆಯುಳ್ಳ ವಿವಿಧ ದೇವಾಲಯಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಪ್ರಾಚ್ಯ ವಸ್ತು ಪರಂಪರೆ ಇಲಾಖೆ ವ್ಯಾಪ್ತಿಗೊಳಪಡುವ ಚಾಮರಾಜ ನಗರ ತಾಲೂಕಿನ ಇತಿಹಾಸವುಳ್ಳ ನರಸಮಂಗಲದ ರಾಮಲಿಂಗೇಶ್ವರ ದೇವಾಲಯಕ್ಕೆ ಮೊದಲಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿನ ದೇವಾಲಯದ ಸಂಪೂರ್ಣ ಪ್ರದೇಶವನ್ನು ವೀಕ್ಷಿಸಿದರು. ದೇವಾಲಯದ ಸಪ್ತಮಾತೃಕೆ ಮೂರ್ತಿಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಇದರ ಇತಿಹಾಸ ಪರಿಚಯಿಸುವ ಮಹತ್ವದ ಬಗ್ಗೆ ಹೆಚ್ಚು ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಗ್ರಾಮಸ್ಥರ ಹಿರಿಯರಿಂದ ದೇವಾಲಯದ ಪರಂಪರೆ, ಇತಿಹಾಸ ಕುರಿತ ಅನುಭವದ ಮಾಹಿತಿ ಪಡೆದರು. ದೇವಾಲಯದ ಆವರಣದಲ್ಲಿ ವಿದ್ಯುತ್ ದೀಪ ಅಳವಡಿಸಬೇಕು, ಅತ್ಯಂತ ಪುರಾತನ ದೇವಾಲಯದ ಸಂರಕ್ಷಣೆಗೆ ವಿಶೇಷ ಒತ್ತು ನೀಡಬೇಕು ಎಂದರು.
ಬಳಿಕ ಗುಂಡ್ಲುಪೇಟೆ ಪಟ್ಟಣದ ಆರಂಭದಲ್ಲಿಯೇ ಇರುವ ಪರವಾಸುದೇವ ದೇವಾಲಯಕ್ಕೆ ಭೇಟಿ ಕೊಟ್ಟು ಅಲ್ಲಿನ ಕಲ್ಯಾಣಿ ಕೊಳ ವೀಕ್ಷಿಸಿದರು. ದೇವಾಲಯ ಸುತ್ತಮುತ್ತಲ ಪ್ರದೇಶ ಪರಿಶೀಲಿಸಿ ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಿದರು. ದೇವಾಲಯದ ಸಂಬಂಧ ಇರುವ ಜಾಗದ ಸಮಸ್ಯೆಗಳ ಬಗ್ಗೆ ವಿವರ ಪಡೆದ ಜಿಲ್ಲಾಧಿಕಾರಿಗಳು ಈ ಸಂಬಂಧ ದಾಖಲೆ ಸಂಗ್ರಹಿಸಿಟ್ಟುಕೊಳ್ಳಬೇಕು. ದೇವಾಲಯದ ಸಂರಕ್ಷಣೆ ಹಾಗೂ ನೈರ್ಮಲ್ಯ ಕಾಪಾಡಲು ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದ ವಿಜಯ ನಾರಾಯಣ ದೇವಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಾಲಯದ ಇತಿಹಾಸ, ಪರಂಪರೆ ಕುರಿತು ಪ್ರವಾಸಿಗರು, ಸ್ಥಳೀಯರಿಗೆ ತಿಳಿಸುವಂತಾಗಬೇಕು. ದೇವಾಲಯ ಕುರಿತು ಫಲಕಗಳನ್ನು ಅಳವಡಿಸಬೇಕು, ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ನಿರ್ದೇಶನ ನೀಡಿದರು.
ತಹಶೀಲ್ದಾರ್ ನಂಜುಂಡಯ್ಯ, ಪ್ರವಾಸೋದ್ಯಮ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಪುರಸಭೆ ಮುಖ್ಯ ಅಧಿಕಾರಿ ರಮೇಶ್, ಪ್ರಾಚ್ಯ ವಸ್ತು ಇಲಾಖೆ ಸ್ಥಳೀಯ ಅಧಿಕಾರಿಗಳು ಇದ್ದರು