Advertisement

ಜಿಲ್ಲಾ ಆಸ್ಪತ್ರೆಗೆ ಡೀಸಿ ದಿಢೀರ್‌ ಭೇಟಿ

09:17 PM Feb 28, 2020 | Lakshmi GovindaRaj |

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಅವರು ನಗರದ ಜಿಲ್ಲಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಅವರಿಗೆ ಆಸ್ಪತ್ರೆಯಲ್ಲಿ ನೆರೆದಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರು ಅಲ್ಲಿನ ಸೇವೆ ಹಾಗೂ ವ್ಯವಸ್ಥೆಗಳ ಕುರಿತು ಗಮನ ಸೆಳೆದರು. ಸೆಂಟ್ರಲ್‌ಲ್ಯಾಬ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಅವರು, ಅಲ್ಲಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

Advertisement

ಆಯಾ ದಿನವೇ ಚಿಕಿತ್ಸೆ, ಸಲಹೆ ನೀಡಿ: ಇದೇ ವೇಳೆ ಅಲ್ಲಿದ್ದ ಸಾರ್ವಜನಿಕರು ಮಾತನಾಡಿ, ರಕ್ತ ಪರೀಕ್ಷೆಗಾಗಿ ಶಿಫಾರಸು ಮಾಡುವ ರೋಗಿಗಳಿಗೆ ವೈದ್ಯರು ಆಯಾ ದಿನವೇ ರಕ್ತ ಪರೀಕ್ಷೆ ವರದಿಗಳನ್ನು ಪರಿಶೀಲಿಸಿ ಮುಂದಿನ ಚಿಕಿತ್ಸೆ, ಸಲಹೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.

ಕುಳಿತುಕೊಳ್ಳಲು ಅವಕಾಶ ಕಲ್ಪಿಸಿ: ಹೆರಿಗೆ ವಾರ್ಡ್‌, ಹೊರ ರೋಗಿ ವಿಭಾಗಗಳಲ್ಲಿ ವೀಕ್ಷಿಸಿದ ವೇಳೆ ಹಲವರಿಗೆ ಕುಳಿತುಕೊಳ್ಳಲು ಸ್ಥಳದ ಅವಕಾಶವಿಲ್ಲದ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಮಹಿಳೆಯರು ಕುಳಿತುಕೊಳ್ಳಲು ಸೂಕ್ತ ಸ್ಥಳಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಬೆಳಗ್ಗೆಯಿಂದಲೇ ಹೊರರೋಗಿ ವಿಭಾಗಗಳಲ್ಲಿ ವೈದ್ಯರು ಹಾಜರಿದ್ದು, ರೋಗಿಗಳ ತಪಾಸಣೆ, ಚಿಕಿತ್ಸೆಗೆ ಸಲಹೆ ಮಾಡಬೇಕು. ಇದರಿಂದ ಸಾಕಷ್ಟು ಸಮಯ ರೋಗಿಗಳು ಕಾದು ಕುಳಿತುಕೊಳ್ಳುವುದು ತಪ್ಪಲಿದೆ ಎಂದು ಜಿಲ್ಲಾಧಿಕಾರಿ ವೈದ್ಯರಿಗೆ ತಿಳಿಸಿದರು.

ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿ: ಅಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ತಯಾರಿಸಲಾಗುವ ಅಡುಗೆ ಕೋಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಪ್ರಮಾಣೀಕೃತ ಅಡುಗೆ ತಯಾರಕರೇ ಆಹಾರ ಸಿದ್ಧಪಡಿಸಬೇಕು. ರೋಗಿಗಳಿಗೆ ಆಹಾರ ವಿತರಿಸುವ ಮೊದಲು ವೈದ್ಯರು ಆಹಾರ ಸೇವನೆ ಮಾಡಿ, ಗುಣಮಟ್ಟ ಹಾಗೂ ಪ್ರಮಾಣವನ್ನು ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

Advertisement

ಔಷಧಿಗಳ ಕೊಠಡಿಯನ್ನು ಪರಿಶೀಲಿಸಿ, ದಾಸ್ತಾನು ಇರುವ ಔಷಧಿಗಳ ಬಗ್ಗೆ ಮಾಹಿತಿ ಪಡೆದರು. ಯಾವುದಾದರೂ ಔಷಧಿಗಳ ಕೊರತೆ ಇದೆಯೇ? ರೋಗಿಗಳಿಗೆ ಎಲ್ಲಾ ಅವಶ್ಯಕ ಔಷಧಿಗಳು ಸಿಗುತ್ತಿವೆಯೇ? ಎಂಬ ಬಗ್ಗೆ ಪ್ರಶ್ನಿಸಿ ವಿವರ ಪಡೆದುಕೊಂಡರು.

ರಕ್ತದಾನ ಶಿಬಿರ ಆಯೋಜಿಸಿ: ತುರ್ತು ಘಟಕಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು, ಬಳಿಕ ರಕ್ತ ನಿಧಿ ಕೇಂದ್ರಕ್ಕೆ ತೆರಳಿ ವೀಕ್ಷಿಸಿದರು. ರಕ್ತಕ್ಕೆ ಬೇಡಿಕೆ ಹಾಗೂ ಪೂರೈಕೆಯ ವಿವರ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ರಕ್ತದಾನ ಶಿಬಿರಗಳನ್ನು ವಿವಿಧ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುವ ಮೂಲಕ ರಕ್ತ ಸಂಗ್ರಹಣೆ ಕಾರ್ಯ ಮಾಡಬೇಕು.

ಜಿಲ್ಲಾಡಳಿತ ಭವನದಲ್ಲಿ ಸಹ ರಕ್ತದಾನ ಶಿಬಿರವನ್ನು ಆಯೋಜಿಸಬೇಕು. ಇದಕ್ಕಾಗಿ ತಾವೇ ಖುದ್ದು ಎಲ್ಲ ಸಹಕಾರ ವ್ಯವಸ್ಥೆಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್‌, ಡಾ.ಸತ್ಯಪ್ರಕಾಶ್‌, ಡಾ.ಮಹೇಶ್‌, ರಕ್ತ ನಿಧಿ ಕೇಂದ್ರದ ಡಾ.ಸುಜಾತಾ ಮತ್ತು ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.

ಅಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ, ತ್ಯಾಜ್ಯ ವಿಲೇವಾರಿ ಕೆಲಸಗಳು ಅಸ್ಪತ್ರೆ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗುವ ಮೊದಲೇ ಆಗಬೇಕಿದೆ. ಅಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ನೆರವಾಗುವ ಹೆಲ್ಪ್ಡೆಸ್ಕ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು.
-ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next