ಅಕ್ಕಿಆಲೂರು: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಊಟ ಸವಿದು ಮಕ್ಕಳಿಗೆ ಪಾಠವನ್ನೂ ಮಾಡಿ ಗಮನ ಸೆಳೆದರು.
ಹಾನಗಲ್ಲ ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಎದುರಾದ ಆಧಾರ್ ಕಾರ್ಡ್ ತಿದ್ದುಪಡಿ ಸಮಸ್ಯೆ ಕುರಿತು ಪರಿಶೀಲನೆಗಾಗಿ ತೆರಳಿದ್ದ ಜಿಲ್ಲಾಧಿಕಾರಿಗಳನ್ನೊಳಗೊಂಡ ತಂಡ ಮಧ್ಯಾಹ್ನ ಪಟ್ಟಣದ ಕಲ್ಲಾಪುರ ರಸ್ತೆಯಲ್ಲಿನ ಕಿತ್ತೂರ ರಾಣಿ ಚನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆ ಭೇಟಿ ನೀಡಿದರು. ನಂತರ ಶಾಲೆಯಲ್ಲಿನ ವಿದ್ಯಾರ್ಥಿಗಳೊಂದಿಗೆ ಭವಿಷ್ಯದ ಕುರಿತು ಸಂವಾದ ನಡೆಸಿದರು. 45 ನಿಮಿಷ ತಮ್ಮದೆ ವಿಭಿನ್ನ ಶೈಲಿಯಲ್ಲಿ ಪಾಠ ಮಾಡಿ, ವಿದ್ಯಾರ್ಥಿಗಳನ್ನು ಭಾವನಾ ಲೋಕಕ್ಕೆ ಕರೆದೊಯ್ಯದರು.
ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಸೇರಿ ಹಲವು ಸಾಮಾನ್ಯಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ ಅವರು, ಮೌಲ್ಯಾಧಾರಿತ ಮತ್ತು ನೈತಿಕ ಶಿಕ್ಷಣ ಬೆಳಸಿಕೊಳ್ಳಲು ಬೇಕಾದ ಅಗತ್ಯ ಮನಸ್ಥಿತಿ ಬಗ್ಗೆ ತಿಳಿ ಹೇಳಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಕುಳಿತು ಮಧ್ಯಾಹ್ನದ ಭೋಜನ ಸವಿದರು. ಈ ಸಂದರ್ಭದಲ್ಲಿ ಜಿಲ್ಲಾಕಾರಿಗಳ ಸರಳತೆ, ಒಡನಾಟ ವಿದ್ಯಾರ್ಥಿನಿಯರನ್ನು ಆಕರ್ಷಿಸಿತು.
ವಸತಿ ಶಾಲೆಯ ಸ್ಥಿತಿಗತಿಗಳ ಕುರಿತು ಪ್ರಾಚಾರ್ಯ ಕುಮಾರ ಜೋಗಾರ ಜೊತೆ ಚರ್ಚಿಸಿದರು. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳಾದ ಚೈತ್ರಾ ಬಿ.ವಿ., ಗಂಗಮ್ಮ ಹಿರೇಮಠ, ಹಾನಗಲ್ಲ ತಹಶೀಲ್ದಾರ್ ಗಂಗಪ್ಪ ಎಂ. ಉಪಸ್ಥಿತರಿದ್ದರು.