Advertisement
ಹೌದು, ಸೋಮವಾರ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಲತಾ, ಆಸ್ಪತ್ರೆ ಅವ್ಯವಸ್ಥೆಗಳನ್ನು ಕಂಡು ದಂಗಾದರು. ನೀರು ಸೋರಿಕೆ ಆಗುತ್ತಿದ್ದ ಶೌಚಾಲಯಗಳಲ್ಲಿ ಜಾರಿ ಬೀಳುವ ಅಸ್ವಚ್ಛತೆಯನ್ನು ಕಂಡು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಅನಿಲ್ ಕುಮಾರ್ ಹಾಗೂ ನಿವಾಸಿ ವೈದ್ಯಾಧಿಕಾರಿ ರಮೇಶ್‌ರನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ರೋಗಿಗಳಿಗೆ ತಡ ಮಾಡದ ನೋಂದಣಿ ಮಾಡಬೇಕು. ಚಿಕಿತ್ಸೆಗೂ ಮೊದಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸಿಬ್ಬಂದಿಗೆ ಸಲಹೆ ನೀಡಿದರು. ಬಳಿಕ ಔಷಧ ವಿತರಣಾ ಕೇಂದ್ರಕ್ಕೆ ತೆರಳಿ ಔಷಧಗಳ ಕೊರತೆ ಇದೆಯೇ ಎಂದು ಕೇಳಿದರು. ರೋಗಿಗಳಿಗೆ ಔಷಧ ವಿತರಿಸಬೇಕು. ಗುಣಮಟ್ಟದ ಬಗ್ಗೆ ಪರಿಶೀಲಿಸಿ ವಿತರಣೆ ಮಾಡುವಂತೆ ಸೂಚಿಸಿದರು. ಆ ನಂತರ ಜನೌಷಧ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆದರು.
ತುರ್ತು ಚಿಕಿತ್ಸಾ ಕೇಂದ್ರಕ್ಕೆ ಭೇಟಿ: ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ದಿನದ 24 ಗಂಟೆ ಕಾಲ ವೈದ್ಯರು ಕಡ್ಡಾಯವಾಗಿ ಇರಬೇಕು. ತುರ್ತು ಚಿಕಿತ್ಸಾ ಘಟಕದಲ್ಲಿ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಡ್ಡಾಯವಾಗಿ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಸ್ಟಾಫ್ ನರ್ಸ್‌ಗಳು ಇರಬೇಕು. ಅಗತ್ಯವಾದ ಔಷಧಿಗಳ ದಾಸ್ತಾನು ಇರಬೇಕೆಂದು ಸೂಚಿಸಿದರು.
ಅಲ್ಲಿಂದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್, ಸಾಮಾನ್ಯ ರೋಗಿಗಳ ವಾರ್ಡ್, ಎಕ್ಸೇರೆ, ಸ್ಕ್ಯಾನಿಂಗ್, ರಕ್ತಪರೀಕ್ಷೆ, ಮಕ್ಕಳ, ಅಂಗವಿಕಲರ ಹಾಗೂ ಹಿರಿಯ ನಾಗರಿಕರಿಗೆ ಚಿಕಿತ್ಸೆ ನೀಡುವ ಕೊಠಡಿಗಳಿಗೆ ಭೇಟಿ ನೀಡಿ ವೈದ್ಯರ ಹಾಗೂ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಆಸ್ಪತ್ರೆಯಲ್ಲಿನ ಜೈಲು ವಾರ್ಡ್‌ಗೆ ಭೇಟಿ ಕೊಟ್ಟು ರೋಗಿಗಳಿಗೆ ನೀಡುವ ಮೂಲ ಸೌಕರ್ಯ ಪರಿಶೀಲಿಸಿದರು.
ರೋಗಿಗಳಿಗೆ ಸ್ಪಂದಿಸಿ: ಜಿಲ್ಲಾಸ್ಪತ್ರೆಯ ಪ್ರತಿ ವಾರ್ಡ್‌ಗೂ ಭೇಟಿ ಕೊಟ್ಟು ಮೂಲ ಸೌಕರ್ಯಗಳ ಪರಿಶೀಲನೆ ಜೊತೆಗೆ ರೋಗಿಗಳ ಹಾಗೂ ಅವರ ಸಂಬಂಧಿಕರ ಜೊತೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ, ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ಸಕಾಲದಲ್ಲಿ ಪರೀಕ್ಷೆ ಮಾಡಿ ಅವರಿಗೆ ಚಿಕಿತ್ಸೆ ನೀಡಬೇಕು. ಏನಾದರೂ ಸಮಸ್ಯೆಗಳಿದ್ದರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದರು. ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್, ನಿವಾಸಿ ವೈದ್ಯಾಧಿಕಾರಿ ರಮೇಶ್, ಮಕ್ಕಳ ತಜ್ಞರಾದ ರವಿಕುಮಾರ್, ಪ್ರಕಾಶ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳು ಉಪಸ್ಥಿತರಿದ್ದರು.
ರಕ್ತ ಪರೀಕ್ಷೆಗೆ ಬಾಣಂತಿಯರ ಸಾಲು: ಬಾಣಂತಿಯರನ್ನು ರಕ್ತಪರೀಕ್ಷೆಗೆ ಕಳಿಸಿದ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ಧೋರಣೆ ವಿರುದ್ಧ ಜಿಲ್ಲಾಧಿಕಾರಿ ಆರ್.ಲತಾ ಕಿಡಿಕಾರಿದರು. ಬಾಣಂತಿಯರನ್ನು ಸಾಲಾಗಿ ನಿಲ್ಲಿಸಬೇಡಿ. ಸಿಬ್ಬಂದಿಯೇ ರಕ್ತ ಪರೀಕ್ಷೆ ಮಾಡಿಸಿಕೊಡಬೇಕೆಂದರು. ಇದೇ ವೇಳೆ ನಮ್ಮ ಸಂಬಂದಿಕರು ಯಾರು ಇಲ್ಲ ಅಂದರೂ ನನ್ನನೇ ರಕ್ತ ಪರೀಕ್ಷೆಗೆ ಕಳುಹಿಸಿದ್ದಾರೆ. ಮೂರು ದಿನದ ಮಗು ಇದೆ. ಅಲ್ಲಿ ಯಾರು ನೋಡಿಕೊಳ್ಳಕ್ಕೆ ಇಲ್ಲ ಎಂದು ಬಾಣಂತಿಯೊಬ್ಬರು ಡೀಸಿ ಎದುರು ಅಳಲು ತೋಡಿಕೊಂಡರು.
ಜಿಲ್ಲಾಸ್ಪತ್ರೆಯಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಈ ಬಗ್ಗೆ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸ್ವಚ್ಛತೆ, ನೈರ್ಮಲ್ಯಕ್ಕೆ ಒತ್ತು ಕೊಡಬೇಕೆಂದು ಸೂಚಿಸಿದ್ದೇನೆ. ಕುಡಿಯುವ ನೀರು, ಹಾಗೂ ರೋಗಿಗಳಿಗೆ ಕಡ್ಡಾಯವಾಗಿ ಬಿಸಿ ನೀರಿನ ಸೌಕರ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರಿಂದ ಏನೇ ದೂರು ಬಂದರೂ ಆಸ್ಪತ್ರೆ ವೈದ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.-ಆರ್.ಲತಾ, ಜಿಲ್ಲಾಧಿಕಾರಿ