ಹಾವೇರಿ: ಜಿಲ್ಲಾ ಹಂತದಲ್ಲಿ ಇತ್ಯರ್ಥಪಡಿಸುವ ಗ್ರಾಮದ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಸರ್ಕಾರದ ಹಂತದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಶನಿವಾರ ಹಾನಗಲ್ಲ ತಾಲೂಕು ಉಪ್ಪಣಸಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ಕೆಲವು ರೈತರ ಜಮೀನಿಗೆ ಹೋಗಲು ದಾರಿಗಳಿಲ್ಲ ಎಂಬ ಬಗ್ಗೆ ಅರ್ಜಿಗಳು ಬಂದಿವೆ. ಆದರೆ ಪ್ರಸ್ತುತ ಸಾಗುವಳಿ ಮಾಡುತ್ತಿರುವ ಜಮೀನುಗಳು ರೈತರ ಖಾಸಗಿ ಜಮೀನುಗಳಾಗಿವೆ. ಈ ಸಮಸ್ಯೆಯನ್ನು ಸರ್ಕಾರದ ಹಂತದಲ್ಲಿ ಇತ್ಯರ್ಥಪಡಿಸಬೇಕಾಗುತ್ತದೆ. ಈ ಕುರಿತಂತೆ ಸರ್ಕಾರದ ಹಂತದಲ್ಲಿ ಚಿರ್ಚಸಲಾಗುವುದು ಎಂದರು.
ಬಾಕಿ ಪಟ್ಟಾ ನೀಡಲು ಮನವಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ತಾಲೂಕಿನ ಎಲ್ಲ ಅಧಿಕಾರಿಗಳು ಸೇರಿ ಆಯಾ ತಾಲೂಕು ಮಟ್ಟದ ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುತ್ತಿರುವುದು ಸರ್ಕಾರದ ಮಹತ್ವದ ನಿರ್ಧಾರವಾಗಿದೆ. ಕಂದಾಯ ಇಲಾಖೆಯಿಂದ ಇನ್ನೂ ಕೆಲವು ಪಟ್ಟಾಗಳನ್ನು ಕೊಡುವ ಪ್ರಕ್ರಿಯೆ ಬಾಕಿ ಇದ್ದು, ಅದನ್ನು ಪರಿಹರಿಸಿ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದರು.
ಕೋವಿಡ್‌ನಿಂದ ಮೃತರಾದವರಿಗೆ ಪರಿಹಾರ ಬಾಕಿ, ಬೆಳೆ ನಷ್ಟ ಪರಿಹಾರ, ಜಮೀನುಗಳಿಗೆ ದಾರಿ, ಪಟ್ಟಾ ನೀಡುವಿಕೆ, ಉತಾರ, ಮನೆಗಳ ಮಂಜೂರಾತಿ ಸೇರಿದಂತೆ ಹಲವು ಸಮಸ್ಯೆಗಳ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.
ಅಂಗನವಾಡಿ ಮಕ್ಕಳ ಜನ್ಮದಿನಾಚರಣೆ, ವಿವಿಧ ಇಲಾಖಾ ಜಾಗೃತಿ ಹಾಗೂ ಪ್ರಚಾರ ಮಳಿಗೆಗಳಿಗೆ ಚಾಲನೆ ನೀಡಲಾಯಿತು.
ತಹಶೀಲ್ದಾರ್ ಪಿ.ಎಸ್.ಯರೇಸ್ವಾಮಿ ಮಾಹಿತಿ ನೀಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಂದ ಒಟ್ಟು 148 ಅರ್ಜಿಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ ಸ್ಥಳದಲ್ಲಿಯೇ 34 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸವಣೂರು ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಲ್ಲದಾಳ, ಉಪಾಧ್ಯಕ್ಷೆ ಶಮಶಾದ್ ಬೇಗಮ್ ಸೇರಿದಂತೆ ವಿವಿಧಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.