ಯಾದಗಿರಿ: ವಡಗೇರಾದಲ್ಲಿನ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಭೇಟಿ ನೀಡಿ ಮಕ್ಕಳಿಗೆ ಒದಗಿಸುತ್ತಿರುವ ಮೂಲಭೂತ ಸೌಕರ್ಯ ಕುರಿತು ಪರಿಶೀಲಿಸಿದರು.
ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲ ಕೋಣೆಗಳ ಸ್ವತ್ಛತೆಗೆ ಆದ್ಯತೆ ನೀಡಿ ಶೌಚಾಲಯ, ಕುಡಿವ ನೀರು ಅಗತ್ಯ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
ನಂತರ ವಡಗೇರಾ ತಹಶೀಲ್ದಾರ್ ಕಚೇರಿಯಲ್ಲಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಧಿಕಾರಿಗಳ ಸಭೆ ನಡೆಸಿ ಸಲ್ಲಿಕೆಯಾದ ಅರ್ಜಿ ಖುದ್ದು ಪರಿಶೀಲಿಸಿ ಮಾತನಾಡಿದರು.
ತಾಲೂಕು ಕಚೇರಿಗೆ ಸಮಸ್ಯೆ ಹೊತ್ತುಕೊಂಡು ಬರುವ ಜನರೊಂದಿಗೆ ವಿನಯತೆಯಿಂದ ವರ್ತಿಸಿ ಸ್ಥಳದಲ್ಲೇ ಪರಿಹಾರ ಒದಗಿಸಿ ಜನರ ತೊಂದರೆಗಳಿಗೆ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಂದಾಯ ಗ್ರಾಮ, ಮಾಸಾಶನ, ಪಹಣಿ, ಮೋಜನಿ ಕಡತಗಳು, ಆರ್‌ಟಿಸಿ, ಎಜೆಎಸ್ಕೆ ತಂತ್ರಾಂಶದಡಿ ಸ್ವೀಕೃತವಾದ ಅರ್ಜಿಗಳು, ನವೋದಯ ಆಪ್ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಸಕಾಲ ಅಡಿ ನೋಂದಾಯಿತ ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸಿ ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ, ತಾಪಂ ಇಒ ಬಸವರಾಜ ಸಜ್ಜನ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ| ರಮೇಶ ಗುತ್ತೇದಾರ, ಉಪ ತಹಶೀಲ್ದಾರ್ ಸಿದ್ದಯ್ಯಸ್ವಾಮಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.